ವಿಜಯಪುರ: ಮೈಸೂರಿನ ವಿಮಾನ ನಿಲ್ದಾಣಕ್ಕೆ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಹೆಸರಿಡಲು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಎಕ್ಸ್(ಟ್ವಿಟರ್)ನಲ್ಲಿ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ.
ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಸಭೆ ಅಧಿವೇಶನದಲ್ಲಿ ಕರ್ನಾಟಕದ ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ, ವಿಜಯಪುರ ಸೇರಿದಂತೆ ನಾಲ್ಕು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಈ ಹಿನ್ನಲೆ ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಕರ್ನಾಟಕ ಸರ್ಕಾರ ಶಿಫಾರಸ್ಸು ಮಾಡಬೇಕು. ಅವರ ಕೊಡುಗೆ ಕರ್ನಾಟಕ ಹಾಗು ಭಾರತಕ್ಕೆ ಅಪಾರವಾದದ್ದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ, ಶಿವಮೊಗ್ಗ, ಹುಬ್ಬಳ್ಳಿ, ವಿಜಯಪುರ ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ನಿರ್ಣಯ ಅಂಗೀಕಾರ ಮಾಡಲಾಗಿತ್ತು. ಆಗ ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯ್ಯ ಹೆಸರಿಡುವಂತೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಒತ್ತಾಯಿಸಿದ್ದರು. ಹಾಗೂ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು ಇಡುವಂತೆ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಅವರು ಒತ್ತಾಯಿಸಿದ್ದರು.
ರಾಜ್ಯದ ನಾಲ್ಕು ವಿಮಾನ ನಿಲ್ದಾಣಗಳಿಗೆ ನಾಮಕರಣ ಮಾಡುವ ವಿಚಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯವನ್ನು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂಬಿ ಪಾಟೀಲ್ ಅವರು ಮಂಡಿಸಿದರು. ಈ ನಿರ್ಣಯವು ಅಂಗೀಕಾರ ಪಡೆಯಿತು.
ಇದರ ಬೆನ್ನಲ್ಲೇ ಈಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಎಕ್ಸ್(ಟ್ವಿಟರ್) ನಲ್ಲಿ ಟ್ವೀಟ್ ಮಾಡುವ ಮೂಲಕ ಮೈಸೂರಿನ ವಿಮಾನ ನಿಲ್ದಾಣಕ್ಕೆ ಮಹಾಪ್ರಭುಗಳಾದ ಶ್ರೀ ಮನ್ಮಹಾರಾಜ ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಅವರ ಹೆಸರನ್ನು ಇಡುವಂತೆ ಒತ್ತಾಯಿಸಿದ್ದಾರೆ.