ಲಖನೌ: ಒಂಭತ್ತು ವರ್ಷದ ಬಾಲಕಿ ಮೇಲೆ ವರ್ಷದ ಹಿಂದೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ರಾಮ್ ದುಲಾರೆ ಗೋಂಡ್‌ಗೆ ಉತ್ತರ ಪ್ರದೇಶದ ಸೋಭದ್ರಾ ಜಿಲ್ಲೆಯ ಜನಪ್ರತಿನಿಧಿಗಳ ನ್ಯಾಯಾಲವು ೨೫ ವರ್ಷ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ. ದುದ್ಧಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ಶಾಸಕನಾಗಿದ್ದ ಗೋಂಡ್ ವಿರುದ್ಧದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆತನನ್ನು ದೋಷಿ ಎಂದು ನ್ಯಾಯಾಲಯ ಮಂಗಳವಾರ ಹೇಳಿತ್ತು. ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಸೆರೆವಾಸ ಶಿಕ್ಷೆಯ ಜತೆಗೆ ೧೦ಲಕ್ಷ ದಂಡವನ್ನು ನ್ಯಾಯಾಲಯ ವಿಧಿಸಿದೆ. ಇದನ್ನು ಸಂತ್ರಸ್ತೆಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ.
ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ, `ನ್ಯಾಯ ದೊರೆತಿದೆ’ ಎಂದು ಸಂತ್ರಸ್ತ ಬಾಲಕಿಯ ಸೋದರ ಹೇಳಿದ್ದಾರೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಸಂದರ್ಭದಲ್ಲಿ ಗೋಂಡ್ ಪತ್ನಿ ಅಲ್ಲಿನ ಗ್ರಾಮ ಪಂಚಾಯ್ತಿ ಅಧ್ಯಕ್ಷೆಯಾಗಿದ್ದರು. ಕೃತ್ಯ ನಡೆದಿರುವ ಕುರಿತು ಬಾಲಕಿಯ ಸೋದರ ದೂರು ನೀಡಿದ್ದರು. ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ವಿಚಾರಣೆ ಸಂದರ್ಭದಲ್ಲಿ ಸಂತ್ರಸ್ತೆ ಬಾಲಕಿಯಲ್ಲ ಎಂದು ಸಾಬೀತುಪಡಿಸಲು ನಕಲಿ ಶಾಲಾ ಪ್ರಮಾಣಪತ್ರ ಸೃಷ್ಟಿಸಿದ ಆರೋಪವೂ ಗೋಂಡ್ ಮೇಲಿತ್ತು. ಜತೆಗೆ, ದೂರು ಹಿಂಪಡೆಯುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಹಣದ ಆಮಿಷವೊಡ್ಡಿ, ಅವರ ಮೇಲೆ ಒತ್ತಡ ಹೇರಿದ ಆರೋಪವೂ ಈತನ ಮೇಲಿತ್ತು. ನ್ಯಾಯಾಲಯ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಪೊಲೀಸರು ಗೋಂಡ್‌ನನ್ನು ವಶಕ್ಕೆ ಪಡೆದರು. ಅಪರಾಧಿಯಾಗಿ ಘೋಷಣೆಯಾಗುತ್ತಿದ್ದಂತೆ ವಿಧಾನಸಭಾ ಸದಸ್ಯತ್ವವನ್ನೂ ಕಳೆದುಕೊಳ್ಳುವ ಸಾಧ್ಯತೆ ಇದೆ.
ಶಿಕ್ಷೆ ಪ್ರಕಟಕ್ಕೂ ಮುನ್ನ ಗೋಂಡ್ ಪರ ವಕೀಲರು ಶಿಕ್ಷೆಯ ಪ್ರಮಾಣವನ್ನು ಕಡಿತಗೊಳಿಸುವಂತೆ ನ್ಯಾಯಾಲಯವನ್ನು ಕೋರಿದರು. ಕುಟುಂಬದ ಹಿರಿಯ ವ್ಯಕ್ತಿಯಾಗಿದ್ದು, ಸಾಕಷ್ಟು ಜವಾಬ್ದಾರಿಗಳಿದೆ. ಹೀಗಾಗಿ ಶಿಕ್ಷೆ ಪ್ರಕಟಿಸುವಾಗ ಕರುಣೆ ತೋರಬೇಕೆಂದು ಕೋರಿದರು.
ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ ನ್ಯಾಯಾಲಯ, ಜನಪ್ರತಿನಿಧಿಯೊಬ್ಬ ಇಂಥ ಕೃತ್ಯ ಎಸಗಿದ ನಂತರವೂ ಕಡಿಮೆ ಪ್ರಮಾಣದ ಶಿಕ್ಷೆ ವಿಧಿಸಿದರೆ ಅಥವಾ ನ್ಯಾಯದಾನದಲ್ಲಿ ಕನಿಕರ ತೋರಿದರೆ ಅದು ಸಮಾಜಕ್ಕೆ ತಪ್ಪು ಸಂದೇಶ ರವಾನಿಸಿದಂತಾಗಲಿದೆ ಎಂದು ಅಭಿಪ್ರಾಯಪಟ್ಟಿತು.