ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ-2023 ಜಾರಿ ಮಾಡಲು ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಅಂಗೀಕಾರವಾಗಿರುವುದು ವಕೀಲರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿದಂತಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಹಾಗೂ ವಕೀಲರೂ ಆದ ಎಚ್. ಎ. ವೆಂಕಟೇಶ್ ತಿಳಿಸಿದ್ದಾರೆ.
ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಅವರು, ನ್ಯಾಯವಾದಿಗಳ ಬಹಳ ದಿನಗಳ ಬೇಡಿಕೆ ಈಡೇರಿದಂತಾಗಿದೆ. ವಕೀಲ ವೃತ್ತಿ ಇತರರ ವೃತ್ತಿ ಗಿಂತ ಭಿನ್ನವಾದದ್ದು. ಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವಂಥದ್ದಲ್ಲ. ಕಕ್ಷಿದಾರರಿಗೆ ನ್ಯಾಯ ಒದಗಿಸಲು ವಿವಿಧ ಸ್ಥಳಗಳಿಗೆ ಭೇಟಿ ನೀಡುವುದು ಅನಿವಾರ್ಯವಾಗಿರುತ್ತದೆ ಹಾಗೂ ಯಾವುದೇ ರಕ್ಷಣೆ ಇಲ್ಲದೆ ಕಾರ್ಯನಿರ್ವಹಿಸಬೇಕಾಗುತ್ತದೆ. ಬಹಳ ಪರಿಶ್ರಮದಿಂದ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಿದಾಗ ವಕೀಲರೇ ಆಪತ್ತಿಗೆ ಸಿಕ್ಕಿಹಾಕಿಕೊಳ್ಳಬೇಕಾದ ಸಂದರ್ಭವೂ ಬರುತ್ತದೆ. ಇತ್ತೀಚಿನ ದಿನಗಳಲ್ಲಿ ನ್ಯಾಯ ಒದಗಿಸಿ ಕೊಡುವುದು ಸಾಮಾನ್ಯ ವಿಚಾರವಲ್ಲ, ಇದೊಂದು ತ್ಯಾಗದ ಕೆಲಸ. ವಕೀಲರಿಗೆ ಆರ್ಥಿಕವಾಗಿ ಕೂಡ ಯಾವುದೇ ಭದ್ರತೆ ಇರುವುದಿಲ್ಲ. ಅನ್ಯಾಯದ ವಿರುದ್ಧ ಹೋರಾಡಲು, ನಿರ್ಭೀತಿಯಿಂದ ಕೆಲಸ ಮಾಡಲು ನೂತನ ಮಸೂದೆ ಸಹಕಾರಿಯಾಗಲಿದೆ ಎಂದಿದ್ದಾರೆ.
ನ್ಯಾಯವಾದಿಗಳ ಮೇಲೆ ಸುಳ್ಳು ಮುಖದೊಮ್ಮೆ ದಾಖಲಿಸುವುದು, ಹಲ್ಲೆ ಮಾಡುವುದು, ಗುಂಡಾಗಿರಿ ನಡೆಸುವವರಿಗೆ ಕಡಿವಾಣ ಹಾಕಿದಂತಾಗಿದೆ. ಸ್ವತಹ ವಕೀಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ಕಾನೂನು ಮಂತ್ರಿ ಎಚ್. ಕೆ. ಪಾಟೀಲ್, ಗೃಹ ಮಂತ್ರಿ ಡಾ. ಜಿ ಪರಮೇಶ್ವರ ರವರ ಆಸಕ್ತಿಯಿಂದ ಹೊಸ ಕಾಯ್ದೆ ಜಾರಿಯಾಗಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.