ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜಿಗಿ ಜಿಗಿ ಎನ್ನುತ್ತಿರುವ ಮಾರುಕಟ್ಟೆ…ಗ್ರಾಹಕರನ್ನು ಸೆಳೆಯಲು ಮಾರಾಟಗಾರರ ಭಾರಿ ಕಸರತ್ತು… ಯಾವ ತರಕಾರಿ ಬೇಕು ಕೆ.ಜಿ 20ರೂ 30 ರೂ ಎಂದು ಕೂಗುತ್ತಿರುವ ಮಾರಾಟಗಾರರು… ನಿಮಗೆ ಇಷ್ಟವಾದ ತಿಂಡಿ ಕ್ಷಣದಲ್ಲಿಯೇ ರೆಡಿ…ಬನ್ನಿ ಬನ್ನಿ ಲೆಮೆನ್ ಜ್ಯೂಸ್ ಬೇಕಾ ಇಲ್ಲ ಹಣ್ಣಿನ ಜ್ಯೂಸಾ ಬೇಗ ಬೇಗ ಬನ್ನಿ.
ಇದೇನು ಇದು ಯಾವ ಸಂತೆ ಅಂತ ಎಂದು ಅಚ್ಚರಿ ಪಡಬೇಡಿ ಇದು ಸಾಲಿಗ್ರಾಮ ತಾಲೂಕಿನ ಹೊಸೂರು ಗ್ರಾಮದ ಹಿಪ್ಪೋಕ್ಯಾಂಪಸ್ ಕಲಿಕಾ ಕೇಂದ್ರದಲ್ಲಿ ಇಂದು ಆಯೋಜಿಸಲಾಗಿದ್ದ ಮಕ್ಕಳ ಸಂತೆಯಲ್ಲಿ ಕಂಡು ಬಂದು ದೃಶ್ಯಗಳಿವು……..
ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಎಚ್.ಡಿ.ಗೋಪಾಲ್ ಉದ್ಘಾಟಿಸಿ ಕಾರ್ಯಕ್ರಮ ಆರಂಭವಾಗುತ್ತಿದ್ದಂತೇಯೇ ಮಕ್ಕಳು ತಮ್ಮ ತಮ್ಮ ತಾಯಂದಿರ ಜೊತೆ ಶಾಲೆ ಬಳಿ ಅವರೆಕಾಯಿ,ತೊಗರಿಕಾಯಿ ಸೇರಿದಂತೆ ತರಕಾರಿಗಳು,ವಿವಿಧ ಬಗೆಯ ಹಣ್ಣುಗಳನ್ನು ಭರ್ಜರಿಯಾಗಿ ಗ್ರಾಹಕರಿಗೆ ಮಾರಾಟ ಮಾಡಿದ ಮಕ್ಕಳು ತರಕಾರಿ ತಿಂದರೆ ಸಿಗುವ ಅನುಕೂಲಗಳನ್ನು ವಿವರಿಸಿ ಗ್ರಾಹಕರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದರು.
ಇನ್ನು ಈ ಸಂತೆಯಲ್ಲಿ ಮಕ್ಕಳೆ ತಯಾರಿಸಿದ ವಿವಿಧ ಬಗೆಯ ತಿಂಡಿ ತಿನಿಸುಗಳು ಮತ್ತು ಲೆಮೆನ್ ಜ್ಯೂಸ್ ಜೊತೆಗೆ ವಿವಿದ ತರಕಾರಿಗಳು, ಕುರುಕಲು ತಿಂಡಿಗಳನ್ನು ಭರ್ಜರಿಯಾಗಿ ಮರಾಟ ಮಾಡಿದ್ದು ಸಂತೆ ಮಾರುಕಟ್ಟೆಗಳಿಗೆ ಕಡಿಮೆ ಇಲ್ಲದಂತೆ ಗಿಜಿಗಿಜಿ ಎನ್ನುತ್ತಾ ಇಂದು ನಡೆದಿದ್ದು ವಿಶೇಷವಾಗಿತ್ತು.

ಸುಮಾರು ೪ವರ್ಷದಿಂದ ೬ವರ್ಷದ ಮಕ್ಕಳ ಸಂತೆ ಇದಾಗಿದ್ದು ದೊಡ್ಡವರನ್ನೇ ನಾಚುವಂತೆ ವ್ಯಾಪಾರ ಮಾಡಿದ ಮಕ್ಕಳು ಬಂದವರೆಲ್ಲರನ್ನು ತಮ್ಮತ್ತ ಸೆಳೆಯಲು ಅಂಕಲ್,ಆಂಟಿ ಬನ್ನಿ ತಾತಾ ಅಜ್ಜಿ ಬನ್ನಿ ಎನ್ನುತ್ತಾ ತಾವು ತಂದಿದ್ದ ಬಹುತೇಕ ಪದಾರ್ಥಗಳನ್ನು ಮಾರಾಟ ಮಾಡಿ ಅಮ್ಮಂದಿರಿಗೆ ಹಣ ನೀಡುತ್ತಾ ತಾವು ಸಂತೆಯಲ್ಲಿ ಸಿಕ್ಕ ತಿಂಡಿಗಳನ್ನು ತಿಂದು ಸಂತಸಪಟ್ಟರು.
ಮಕ್ಕಳ ಸಂತೆ ವೀಕ್ಷಣೆಗಾಗಿ ಗ್ರಾಮದ ಬಹುತೇಕ ಮಹಿಳೆಯರು ಬಂದು ಮಕ್ಕಳೊಂದಿಗೆ ಚೌಕಾಸಿ ಮಾಡುತ್ತಾ ವ್ಯಾಪಾರ ಮಾಡಿ ಖರೀದಿ ಮಾಡುತ್ತಿದ್ದ ದೃಶ್ಯ ಸಾಕಷ್ಟು ಜನರಿಗೆ ಮನರಂಜನೆ ನೀಡಿತು ಅಲ್ಲದೇ ನಿಜ ಸಂತೆಯನ್ನು ಮೀರಿಸುವಂತೆ ಈ ಮಕ್ಕಳ ಸಂತೆ ನಡೆದಿದ್ದು ಮತ್ತೊಂದು ವಿಶೇಷವಾಗಿತ್ತು. ಮಕ್ಕಳ ಸಂತೆಯ ಕಾರ್ಯಕ್ರಮವನ್ನು ಅಚ್ಚು ಕಟ್ಟಾಗಿ ಮಾಡಿ ಶಾಲೆಯ ಮುಖ್ಯ ಶಿಕ್ಷಕಿ ಸೌಮ್ಯಸತೀಶ್,ಶಿಕ್ಷಕಿಯರಾದ ಪಲ್ಲವಿ,ಹರ್ಷಿತಾ ಅವರು ಪೋಷಕರು ಮತ್ತು ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾದರು.