ಮಂಗಳೂರು( ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಮುಖ್ಯ ಪೇಟೆಯಲ್ಲಿ ತೆವಳಿಕೊಂಡು ಹೋಗುತ್ತಿದ್ದ ವಿಕಲಚೇತನರೊಬ್ಬರ ಮೇಲೆಯೇ ಕಾರೊಂದು ಹರಿದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಕಡಬದ ಅಂಗಡಿ ಮನೆ ನಿವಾಸಿ ಧರ್ನಪ್ಪ, ಮೃತಪಟ್ಟವರು. ಮುಂಬಯಿ ಮೂಲದ ಕುಟುಂಬವೊಂದು ಮಂಗಳೂರಿನಿಂದ ಬಾಡಿಗೆ ಕಾರಲ್ಲಿ ಕಡಬ ಮಾರ್ಗವಾಗಿ ಸುಬ್ರಹ್ಮಣ್ಯ ಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

ಕಡಬದ ಮುಖ್ಯ ಸರ್ಕಲ್ ಸಮೀಪ ರಸ್ತೆ ದಾಟಲು ಯತ್ನಿಸುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು .ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.ಮೃತರ ಅಣ್ಣ ಬೇಬಿ ನೀಡಿದ ದೂರಿನಂತೆ ಕಾರು ಚಾಲಕನ ವಿರುದ್ದ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪೊಲೀಸ್ ಇಲಾಖೆಯ ನಿಯಂತ್ರಣದಲ್ಲಿರುವ ಸಿಸಿ ಟಿವಿ ನಾಟ್ ವರ್ಕಿಂಗ್: ಅಪಘಾತದಲ್ಲಿ ಗಾಯಗೊಂಡು ಸಾವನ್ನಪ್ಪಿದ ಬೆನ್ನಲ್ಲೆ ಎಚ್ಚೆತ್ತ ಪೊಲೀಸರು ಸಿಸಿಟಿವಿ ದೃಶ್ಯ ಪಡೆಯಲು ಮುಂದಾಗಿದ್ದಾರೆ.ಕಡಬ ಮುಖ್ಯ ಪೇಟೆಯಲ್ಲಿ ಪೊಲೀಸ್ ಇಲಾಖೆಯ ನಿಯಂತ್ರಣ ದಲ್ಲಿರುವ ಸಿಸಿಟಿವಿ ಕೆಟ್ಟು ವರ್ಷವಾಗಿದ್ದು ಸ್ಥಳೀಯ ಅಂಗಡಿಯ ಸಿಸಿ ಟಿವಿ ದೃಶ್ಯ ಪಡೆದು ಪರಿಶೀಲನೆ ಮಾಡಿದ್ದಾರೆ.