ರ್ಚಿತ್ರದುರ್ಗ: ಜೇನು ಕೃಷಿಯು ಪರಿಸರ ಸ್ನೇಹಿಯಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಇದರ ಜತೆಗೆ ರೈತರ ಆದಾಯವನ್ನೂ ಹೆಚ್ಚಿಸುತ್ತದೆ ಎಂದು ಚಿತ್ರದುರ್ಗ ಉಪ ಕೃಷಿ ನಿರ್ದೇಶಕ ಶಿವಕುಮಾರ್ ಹೇಳಿದರು.ಹಿರಿಯೂರು ತಾಲ್ಲೂಕಿನ ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿಂದು ಹಮ್ಮಿಕೊಂಡಿದ್ದ ಜೇನು ಕೃಷಿ ಕುರಿತು ರೈತರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದ ಆರ್ಥಿಕ ಬೆಳವಣಿಗೆ ಹಾಗೂ ಜನರ ಆಹಾರದ ಉತ್ಪಾದನೆಯಲ್ಲಿ ಸುಸ್ಥಿರ ಕೃಷಿ ಅತ್ಯವಶ್ಯಕವಾಗಿದ್ದು, ಅನ್ನದಾತರ ಕೊಡುಗೆ ಬಹು ಮುಖ್ಯವಾಗಿದೆ. ರೈತರು ಸಮಗ್ರ ಕೃಷಿ ಪದ್ದತಿ ಅನುಸರಿಸುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಈ ನಿಟ್ಟಿನಲ್ಲ ಜೇನು ಕೃಷಿಯು ಪರಿಸರಸ್ನೇಹಿಯಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದರು.ಹಿರಿಯೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಮಂಜನಾಥ ಮಾತನಾಡಿ, ಹಿರಿಯೂರು ತಾಲ್ಲೂಕಿನಲ್ಲಿ ವಿವಿಧ ಬೆಳೆವೈವಿದ್ಯತೆ ಇದ್ದು, ಬೆಳೆ ಪರಿವರ್ತನೆ ಬಹು ಮುಖ್ಯವಾಗಿದ್ದು, ಮಣ್ಣಿನ ಗುಣಧರ್ಮ ಕಾಪಾಡಲು ಸಹಕಾರಿಯಾಗಿದೆ.

ಜೇನು ಕೃಷಿಯ ಪರಾಗ ಸ್ಪರ್ಷ ಕ್ರಿಯೆಯಿಂದ ಸೂರ್ಯಕಾಂತಿ, ಅಡಿಕೆ, ತೆಂಗು ಮತ್ತು ಮುಂತಾದ ಬೆಳೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಸಾಧ್ಯವೆಂದರು.ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಜೇನು ತಜ್ಞ ಶಾಂತವೀರಯ್ಯ ಅವರು, ರೈತರಿಗೆ ಜೇನು ಕೃಷಿಯ ತಾಂತ್ರಿಕತೆಯ ಕುರಿತು ಸವಿವರವಾಗಿ ಕಥಾರೂಪದಲ್ಲಿ ರೈತರಲ್ಲಿ ಆಸಕ್ತಿ ಮೂಡಿಸಿದರು. ಜಗತ್ತಿನ ಶೇ ೯೦ಕ್ಕಿಂತ ಹೆಚ್ಚಿನ ವಿವಿಧ ಜಾತಿಯ ಸಸ್ಯಗಳಿಗೆ ಜೇನು ನೊಣಗಳಿಂದ ಪರಾಗಸ್ಪರ್ಷವಾಗುತ್ತದೆ. ಪ್ರತಿ ಎಕರೆಗೆ ೨-೪ ಜೇನು ಪೆಟ್ಟಿಗೆಗಳನ್ನು ಇಡುವುದರಿಂದ ಅಡಿಕೆ ಮತ್ತು ತೆಂಗಿನ ಬೆಳೆಗಳಲ್ಲಿ ಉತ್ತಮ ಇಳುವರಿ ಸಾಧ್ಯ ಎಂದರು. ಸೂರ್ಯಕಾಂತಿ ಬೆಳೆಯಲ್ಲಿ ಶೇ. ೭೦ ಕ್ಕಿಂತ ಅಧಿಕ ಇಳುಪಡೆಯಲು ಜೇನು ಕೃಷಿ ಸಹಕಾರಿಯಾಗಿದೆ. ಕೃಷಿಯ ಉತ್ಪಾದನೆ ಹೆಚ್ಚಿಸುವುದಲ್ಲದೆ, ಜೇನುತುಪ್ಪವು ಆರೋಗ್ಯದ ದೃಷ್ಠಿಯಲ್ಲಿ ಅಮೃತ ಸಮಾನವಾಗಿದ್ದು, ಅಸ್ತಮಾ, ಮಲಬದ್ದತೆ, ಗ್ಯಾಸ್ಟ್ರಿಕ್, ಸಂಧಿವಾತ ಕಾಯಿಲೆ ನಿವಾರಿಸಲು, ದೇಹದ ಬೊಜ್ಜು ಕರಗಿಸಲು ಮತ್ತು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಬುದ್ದಿವಂತಿಕೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.
ಜೇನುತುಪ್ಪದಲ್ಲಿ ಶರೀರಕ್ಕೆ ಬೇಕಾಗುವ ೪೫ ಪೋಷಕಾಂಶಗಳು ಸುಲಭವಾಗಿ ಜೀರ್ಣವಾಗುವ ರೂಪದಲ್ಲಿ ದೊರೆಯುತ್ತವೆ. ಜೇನು ಕುಟುಂಬವು ಒಗ್ಗಟ್ಟಿನಿಂದ ದುಡಿಯುವುದನ್ನು ನೋಡಿ ನಾವು ಸಹ ಕಲಿಯುವುದು ಬಹಳವಿದೆ. ತಾಂತ್ರಿಕ ತರಬೇತಿಯ ನಂತರ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಮಾವಿನ ತೋಪಿನಲ್ಲಿ ಇದ್ದ ಜೇನು ಪೆಟ್ಟಿಗೆ ಘಟಕಕ್ಕೆ ಭೇಟಿ ನೀಡಿ, ರೈತರಿಗೆ ಜೇನು ಪಟ್ಟಿಗೆಯ ನಿರ್ವಹಣೆಯ ಪ್ರಾಯೋಗಿಕ ವಿವರ, ಜೇನು ನೊಣದ ಜೇವನಚರಿತ್ರೆ, ಜೇನು ಕಟುಂಬದಲ್ಲಿ ರಾಣಿ ಜೇನು, ಗಂಡು ಜೇನು ನೋಣ ಮತ್ತು ಕೆಲಸಗಾರರ ಪಾತ್ರದ ಕುರಿತು ಸಮಗ್ರ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಬಬ್ಬೂರು ಫಾರಂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಆರ್.ರಜನೀಕಾಂತ್, ಕೃಷಿ ಅಧಿಕಾರಿಗಳಾದ ರಂಜಿತಾ, ಪವಿತ್ರ ಹಾಗೂ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಿಬ್ಬಂದಿ ಹಾಗೂ ರೈತರು ಇದ್ದರು.
