ಬಳ್ಳಾರಿ: ಬಾಣಂತಿಯರ ರಕ್ತದಲ್ಲಿ ಕಬ್ಬಿಣಾಂಶ ಪ್ರಮಾಣ ಮತ್ತು ಅಲ್ಬುಮೀನ್ ಪರೀಕ್ಷೆಯನ್ನು ಪ್ರತಿ ತಿಂಗಳು ಮಾಡಿಸುವ ಮೂಲಕ ರಕ್ತಹೀನತೆ ಮತ್ತು ರಕ್ತದೊತ್ತಡ ಸಮಸ್ಯೆ ಸಕಾಲದಲ್ಲಿ ಗುರ್ತಿಸಿ ಚಿಕಿತ್ಸೆ ನೀಡಬಹುದಾಗಿದ್ದು, ತಾಯಿಯ ಸುರಕ್ಷಿತ ಹೆರಿಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬೆಂಗಳೂರು ನಿರ್ದೇಶನಾಲಯ ತಾಯಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಉಪನಿರ್ದೇಶಕ ಡಾ.ರಾಜಕುಮಾರ್ ಅವರು ಸೂಚಿಸಿದರು.
ಸಿರುಗುಪ್ಪ ತಾಲ್ಲೂಕಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮದುವೆ ನಂತರದಲ್ಲಿ ಗಂಡನ ಮನೆಯವರು ತಮ್ಮ ಮನೆಗೆ ಒಂದು ಮಗು ಬರಲಿ ಎಂಬುದು ಸಹಜ, ಆದರೆ ಅಷ್ಟೇ ಮುಖ್ಯವಾದುದು ಗರ್ಭಿಣಿಯ ತಪಾಸಣೆಯಾಗಿದೆ. ಗರ್ಭಿಣಿ ಹೆಣ್ಣು ಮಗಳನ್ನು ಕನಿಷ್ಠ ನಾಲ್ಕು ಬಾರಿ ತಪಾಸಣೆ ಮಾಡಿಸಬೇಕು ಎಂದು ಆಶಾಕಾರ್ತೆಯರಿಗೆ ಸಲಹೆ ಮಾಡಿದರು. ಆರೋಗ್ಯ ಇಲಾಖೆಯಿಂದ ಒದಗಿಸುವ ಕಬ್ಬಿಣಾಂಶ ಮಾತ್ರೆಗಳನ್ನು ಪ್ರತಿದಿನ ಒಂದರಂತೆ ಕನಿಷ್ಠ 180 ಮಾತ್ರೆಗಳನ್ನು ಸೇವಿಸಲು ಸೂಚಿಸಬೇಕು. ಇದರಿಂದ ಹೆರಿಗೆ ಸಮಯದಲ್ಲಿ ಉಂಟಾಗುವ ರಕ್ತಹೀನತೆಯ ತೊಂದರೆ ತಪ್ಪಿಸಬಹುದು ಎಂದು ಹೇಳಿದರು.
ಹೆರಿಗೆಯನ್ನು ಆಸ್ಪತ್ರೆಯಲ್ಲಿ ಮಾಡಿಸುವ ಮೂಲಕ ತಾಯಿ ಮಗುವಿನ ಸುರಕ್ಷತೆಯು ಸಾಧ್ಯವಾಗುತ್ತದೆ. ಈ ದಿಶೆಯಲ್ಲಿ ಪಾಲಕರೊಂದಿಗೆ ಕ್ಷೇತ್ರ ಸಿಬ್ಬಂದಿಗಳು ನಿಗಾವಹಿಸಬೇಕು ಎಂದು ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶಬಾಬು ಅವರು ಮಾತನಾಡಿ, ಮಗುವಿನ ಆರೋಗ್ಯ ದೃಷ್ಟಿಯಿಂದ ಮಾಡುವ ಸ್ಕ್ಯಾನಿಂಗ್ ವೇಳೆ ಭ್ರೂಣಲಿಂಗ ಪತ್ತೆ (ಗಂಡು ಅಥವಾ ಹೆಣ್ಣು) ಮಾಹಿತಿ ಕುರಿತು ಹಂಚಿಕೊಳ್ಳಬಾರದು. ಭ್ರೂಣಹತ್ಯೆಗೆ ಕಾರಣವಾದರೆ ಅಂತವರಿಗೆ ಜೈಲು ಶಿಕ್ಷೆ ಮತ್ತು ದಂಡವಿದೆ ಎಂದು ತಿಳಿಸಿದರು.
18 ವರ್ಷ ತುಂಬಿದ ನಂತರವೇ ಹೆಣ್ಣು ಮಗಳಿಗೆ ಮದುವೆ ಮಾಡಿಸುವ ಕುರಿತು ಜಾಗೃತಿ ನೀಡಬೇಕು. ಮದುವೆ ನಂತರ ಗರ್ಭಿಣಿಯಂದು ಗೊತ್ತಾದ ಕೂಡಲೇ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿ ತಾಯಿ ಕಾರ್ಡ್ ಪಡೆದುಕೊಂಡು, ಕನಿಷ್ಠ ಎರಡು ಟಿಡಿ ಚುಚ್ಚುಮದ್ದು ಲಸಿಕೆ ಪಡೆಯಲು ಸೂಚಿಸಬೇಕು ಎಂದು ಹೇಳಿದರು. ಗಂಡಾಂತರ ಗರ್ಭಿಣಿಯೆಂದು ನಿರ್ಧರಿಸುವ ಅಂಶಗಳಾದ 18 ವರ್ಷಕ್ಕಿಂತ ಮೊದಲು ಅಥವಾ 30 ವರ್ಷ ವಯಸ್ಸಿನ ನಂತರ ಗರ್ಭಿಣಿಯಾದಲ್ಲಿ, ರಕ್ತದಲ್ಲಿ ಕಬ್ಬಿಣಾಂಶ 9ಕ್ಕಿಂತ ಕಡಿಮೆ ಇದ್ದಲ್ಲಿ, ಎತ್ತರ 142 ಸೆ.ಮೀ ಗಿಂತ ಕಡಿಮೆ ಇದ್ದಲ್ಲಿ, ರಕ್ತದೊತ್ತಡ 140/90 ಗಿಂತ ಹೆಚ್ಚು ಇದ್ದಲ್ಲಿ, ಅವಳಿ-ಜವಳಿ ಗರ್ಭಿಣಿ ಇದ್ದಲ್ಲಿ, ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ, ಹೆಚ್‍ಐವಿ, ಹೆಚ್‍ಬಿಎಸ್‍ಎಸಿಜಿ, ಮೂರ್ಚೆರೋಗ, ಥೈರಾಯ್ಡ್, ಹೈಪೆÇಥೈರಾಯ್ಡ್, ರಕ್ತ ಸಂಬಂಧಿತ ಖಾಯಿಲೆಗಳಿದ್ದಲ್ಲಿ, ಗರ್ಭಕೋಶದ ಬೆಳವಣಿಯ ತೊಂದರೆ, ಸ್ಕ್ಯಾನಿಂಗ್‍ನಲ್ಲಿ ಮಗು ಅಡ್ಡಲಾಗಿ ಇರುವುದು ಕಂಡುಬಂದಲ್ಲಿ, ಮಾಸದ ಸ್ಥಳದ ಅಡಚಣೆ (ಪ್ಲಸೇಂಟಾ ಪ್ರಿವಿಯಾ) ಮುಂತಾದ ತೊಂದರೆಗಳು ಇರುವವರನ್ನು ದಯವಿಟ್ಟು ಸಕಾಲದಲ್ಲಿ ಮೇಲ್ಮಟ್ಟದ ವೈದ್ಯರ ಮಾರ್ಗದರ್ಶನ ಪಡೆದು, ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಲು ಕ್ರಮವಹಿಸಿ ಎಂದು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಅನೀಲ ಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ವೀರೇಂದ್ರಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಈರಣ್ಣ, ಹಿರಿಯ ವೈದ್ಯಾಧಿಕಾರಿ ಡಾ.ಬಸವರಾಜ್ ದಮ್ಮುರು, ಆಡಳಿತ ವೈದ್ಯಾಧಿಕಾರಿ ಡಾ.ಗುರುನಾಥ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ, ವೈದ್ಯಾಧಿಕಾರಿಗಳಾದ ಡಾ.ತಿಪ್ಪೆಸ್ವಾಮಿ ರೆಡ್ಡಿ, ಡಾ.ಸಾಗರ್, ಡಿಎನ್‍ಓ ಗಿರೀಶ್, ಡಿಪಿಎಮ್ ವೆಂಕೋಬ, ಹಿ.ನಿ.ಅಧಿಕಾರಿ ಲಿಂಗರಾಜ್, ಭೀಮರಾಜ್, ಬಿಪಿಎಮ್ ಪ್ರಲ್ಹಾದ್, ಬಿಹೆಚ್‍ಇಓ ಖಾಸೀಂ, ಹೆಚ್‍ಐಓ, ಪಿಹೆಚ್‍ಸಿಓ, ಸಿಹೆಚ್‍ಓ, ಸೇರಿದಂತೆ ಆಶಾ ಕಾರ್ಯಕರ್ತೆಯರು, ಇತರರು ಉಪಸ್ಥಿತರಿದ್ದರು.