ಮೈಸೂರು: ನಾಗರಿಕ ಸಮಾಜ ದಲ್ಲಿ ಅನಾಗರಿಕವಾಗಿ ನಡೆಯುತ್ತಿರುವ ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನವೀಯ ಕೃತ್ಯಗಳಿಂದ ಇಡೀ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದ್ದು ಮನುಷ್ಯರಲ್ಲಿ ಮನುಷ್ಯತ್ವ ಇಲ್ಲದಿದ್ದಾಗ ಇಂತಹದ್ದು ನಿರಂತರವಾಗಿ ನಡೆಯುತ್ತಲೇ ಇರುತ್ತವೆಯೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ಅವರು ಹೇಳಿದರು.
ನಗರದ ಕೃಷ್ಣಮೂರ್ತಿಪುರಂ ನಲ್ಲಿರುವ ನಮನ ಕಲಾ ಮಂಟಪದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಡೆದ ‘ಹೆಣ್ಣು ಭ್ರೂಣ ಹತ್ಯೆ- ಒಂದು ಚಿಂತನೆ’ ಮತ್ತು ‘ಬಾಲ ಕಿಶೋರಿ ಸಾಧನಾ ಪ್ರಶಸ್ತಿ’ ಪ್ರದಾನ ಸಮಾರಂಭವನ್ನು ಶ್ರೀ ಬಸೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಭ್ರೂಣ ಹತ್ಯೆಯನ್ನು ಸರ್ಕಾರ ಕಾನೂನಾತ್ಮಕವಾಗಿ ಎಷ್ಟೇ ನಿಯಂತ್ರಣ ಮಾಡಿದರೂ ಸಾಧ್ಯವಾಗದ ಪರಿಸ್ಥಿತಿ ನಮ್ಮಲ್ಲಿ ಇರುವುದರಿಂದ ಇಡೀ ಸಮಾಜ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧ ದನಿಯೆತ್ತಿ ಸ್ವಯಂ ಜಾಗೃತಿ ಗೊಳ್ಳ ಬೇಕೆಂದರು. ನಮ್ಮ ದೇಶವನ್ನು ಭಾರತ ಮಾತೆ ಅಂತೀವಿ, ನಮ್ಮ ನಾಡನ್ನು ಕನ್ನಡಾಂಬೆ ಅಂತೀವಿ, ನಮ್ಮ ನೆಲವನ್ನು ಭೂಮಾತೆ ಅಂತೀವಿ. ಹೆಣ್ಣಿಗೆ ಇಷ್ಟೊಂದು ಮಹತ್ವ ನೀಡುವ ನಾಡಿನಲ್ಲಿ ಇಂತಹ ಗೌರವ ಉಳಿಯ ಬೇಕಾದರೆ ಹೆಣ್ಣು ಭ್ರೂಣ ಹತ್ಯೆ ಯಂತಹ ಮೃಗೀಯ ಕೃತ್ಯ ಗಳನ್ನು ಮಾಡುವವರಿಗೆ ಮತ್ತೆಂದೂ ಮಾಡದ ಹಾಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರಜ್ಞಾವಂತರು ನೋಡಿ ಕೊಳ್ಳ ಬೇಕು. ಹೆಣ್ಣು ಮಕ್ಕಳ ಸಂರಕ್ಷಣೆ ಪ್ರತಿಯೊಂದು ಮನೆಗಳಿಂದಲೇ ಪ್ರಾರಂಭವಾಗಬೇಕೆಂದು ಸಲಹೆ ನೀಡಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ಕವಿ ಜಯಪ್ಪ ಹೊನ್ನಾಳಿ ಅವರು, ಹೆಣ್ಣನ್ನು ಪೂಜಿಸುವ ನಾಡಿನಲ್ಲಿ ಹೆಣ್ಣು ಭ್ರೂಣ ಹತ್ಯೆ ಮನುಕುಲಕ್ಕೆ ನಾಚಿಕೆಗೇಡಿನ ಸಂಗತಿ. ಹೆಣ್ಣನ್ನು ತೋರಿಕೆಗೆ ದೇವತೆ ಮಾಡಿ ಪೂಜನೀಯ ಸ್ಥಾನ ನೀಡಿ ನಿರಂತರವಾಗಿ ಶೋಷಿಸಿ ಕೊಲೆ ಮಾಡಲಾಗುತ್ತಿದೆ. ಹೆಣ್ಣು ಮಕ್ಕಳು ಭೂಮಿ ಮೇಲೆ ಶಾಪಗ್ರಸ್ತವಾಗಿ ಜನಿಸುತ್ತಿವೆ. ಪುರುಷ ಪ್ರಧಾನ ಸಮಾಜದಲ್ಲಿ ನಿತ್ಯ ಹೆಣ್ಣು ಶೋಷಣೆ, ದೌರ್ಜನ್ಯಕ್ಕೊಳಗಾಗುತ್ತಿದ್ದಾ ಳೆಂದು ಆತಂಕ ವ್ಯಕ್ತ ಪಡಿಸಿದ ಅವರು, ಹೆಣ್ಣಿಗೆ ಹೆಣ್ಣೇ ಶತ್ರು ವಾಗುತ್ತಿದ್ದು ವೈದ್ಯರು ಅಮಾನವೀಯ ಕೃತ್ಯ ಎಸಗುವ ಮೂಲಕ ಯಮರಾಗುತ್ತಿದ್ದಾ ರೆಂದು ಕಿಡಿ ಕಾರಿದರು.
ನಗರ ಪಾಲಿಕೆ ಸದಸ್ಯೆ ಶೋಭಾ ಸುನಿಲ್ ಹಾಗು ಅಥರ್ವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸಿಇಓ ಪಿ.ಪುಷ್ಪಲತಾ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಇದೇ ವೇಳೆ ಪ್ರತಿಭಾವಂತ ಸಾಧಕ ಮಕ್ಕಳಾದ ಕು.ನಿಯತಿವಿಜಯ್ ಕುಮಾರ್, ಕು.ತನ್ವಿ ಯೋಗೀಶ್ ಹಾಗು ಕು.ಮಹತಿ ವಿಜಯ್ ಕುಮಾರ್ ಅವರುಗಳಿಗೆ ‘ಬಾಲ ಕಿಶೋರಿ ಸಾಧನಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷ ಮಾಲಂಗಿ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಮಹಾ ನಗರ ಪಾಲಿಕೆಯ ಮಾಜಿ ಸದಸ್ಯ ಸುನಿಲ್, ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವ ರಾಜೇಂದ್ರ ಸ್ವಾಮಿ ಇನ್ನಿತರರಿದ್ದರು.