ಮೈಸೂರು: ನೀರಿನ ಸಮಸ್ಯೆಯಿರುವ ಕಡೆ ಅಗತ್ಯ ಬೋರ್ವೆಲ್ ಕೊರೆಸಿ, ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮವಹಿಸಿ ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ.ಎಂ.ಗಾಯತ್ರಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್‌ನಲ್ಲಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾಸಗಿ ಬೋರ್ವೆಲ್‌ಗಳನ್ನು ಬಾಡಿಗೆಗೆ ಪಡೆದು ನೀರು ಒದಗಿಸಿ, ಅಂತಿಮವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಎಂದರು.
ಮುಖ್ಯಮoತ್ರಿಗಳ ಸೂಚನೆಯಂತೆ ನೀರಿನ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮಗಳಿಗೆ ಭೇಟಿ ನೀಡಿ ನೀರಿನ ಸಮಸ್ಯೆಯಿರುವ ಗ್ರಾಮಗಳ ಪಟ್ಟಿ ಮಾಡಿ, ನೀರಿನ ಸೌಲಭ್ಯ ಕಲ್ಪಿಸಲು ಕ್ರಮ ವಹಿಸುವಂತೆ ಗ್ರಾಮೀಣ ಕುಡಿಯುವ ನೀರಿನ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಮಸ್ಯೆ ಬಂದ ಮೇಲೆ ಯೋಚನೆ ಮಾಡುವುದಕ್ಕಿಂತ ಸಮಸ್ಯೆ ಬರದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ. ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಅಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಮಸ್ಯೆಯಿರುವ ಕಡೆ ಸ್ಥಳಕ್ಕೆ ಭೇಟಿ ಮಾಡಿ, ಪರಿಶೀಲನೆ ನಡೆಸಬೇಕು. ಕೆಲವು ಕಡೆ ಬೋರ್ವೆಲ್ ಕೊರೆಸಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಿರುವುದಿಲ್ಲ. ಅಂತಹ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಿ. ಕೆಲವು ಕಡೆ ಪೈಪ್ ಲೈನ್ ಡ್ಯಾಮೇಜ್ ಆಗಿರುವುದನ್ನು ಸರಿಪಡಿಸಬೇಕು. ಯೀಲ್ಡ್ ಕಡಿಮೆ ಆಗುವ ಕೊಳವೆಬಾವಿಗಳಿಗೆ ನೀರು ಬರುವ ಸಂಭವ ಇದ್ದರೆ ಮರು ಡ್ರಿಲ್ ಮಾಡಿಸಿ. ಓವರ್ ಹೆಡ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸಿ. ನೀರಿನ ಗುಣಮಟ್ಟವನ್ನು ಕಾಲ ಕಾಲಕ್ಕೆ ಪರೀಕ್ಷೆ ನಡೆಸಬೇಕು ಎಂದು ಸೂಚನೆ ನೀಡಿದರು.
ವಿವಿಧ ತಾಲೂಕುಗಳ ಗ್ರಾಮಗಳಲ್ಲಿನ ಕುಡಿಯುವ ನೀರಿನ ಈಗಿನ ಪರಿಸ್ಥಿತಿ ಹಾಗೂ ಮುಂದಿನ ದಿನಗಳಲ್ಲಿ ಮಳೆಯಾಗದೆ ಹೋದರೆ ತೊಂದರೆಗೀಡಾಗುವ ಹಾಡಿ ಹಾಗೂ ಗ್ರಾಮಗಳ ಕುರಿತು ಮಾಹಿತಿ ಪಡೆದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಕಾರ್ಯದರ್ಶಿಗಳಾದ ಕೃಷ್ಣಂ ರಾಜು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.