ಬೆಂಗಳೂರು: ಕಚ್ಚಾ ಬಾಂಬ್ (ಐಇಡಿ) ಬಳಸಿಕೊಂಡು ರಾಜ್ಯದಲ್ಲಿ ದೊಡ್ಡ ಪ್ರಮಾಣದ ಸ್ಫೋಟಕ್ಕೆ ಸಂಚು ರೂಪಿಸಿದ್ದ ಸಂಗತಿಯನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಪತ್ತೆ ಮಾಡಿದ್ದು, ಪ್ರಮುಖ ಶಂಕಿತ ಉಗ್ರ ಸೇರಿ ಎಂಟು ಮಂದಿಯನ್ನು ಬಂಧಿಸಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯ ೧೯ ಪ್ರದೇಶಗಳಲ್ಲಿ ಸೋಮವಾರ ದಾಳಿ ಮಾಡಿರುವ ಎನ್‌ಐಎ ಅಧಿಕಾರಿಗಳು, ಐಎಸ್ ಸಂಘಟಿತ ಸ್ಫೋಟದ ಸಂಚನ್ನು ವಿಫಲಗೊಳಿಸಿದ್ದಾರೆ.
`ಐಎಸ್ ಭಯೋತ್ಪಾದನಾ ಸಂಘಟನೆ ಉಗ್ರರ ಜೊತೆ ಒಡನಾಟ ಹೊಂದಿ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಡಿ. ೧೪ ರಂದು ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆಯಲ್ಲಿ ಲಭ್ಯವಾದ ಖಚಿತ ಮಾಹಿತಿ ಮೇರೆಗೆ ಕರ್ನಾಟಕ, ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ದೆಹಲಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ ೮ ಶಂಕಿತ ಉಗ್ರರನ್ನು ಸೆರೆ ಹಿಡಿಯಲಾಗಿದೆ’ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಶಂಕಿತ ಉಗ್ರರಾದ ಕರ್ನಾಟಕದ ಬಳ್ಳಾರಿಯ ಮಿನಾಜ್ ಅಲಿಯಾಸ್ ಮೊಹಮ್ಮದ್ ಸುಲೈಮಾನ್, ಸೈಯದ್ ಸಮೀರ್, ಬೆಂಗಳೂರಿನ ಮೊಹಮ್ಮದ್ ಮುನಿರುದ್ದಿನ್, ಸೈಯದ್ ಸಮೀವುಲ್ಲಾ, ಮೊಹಮ್ಮದ್ ಮುಜಮಿಲ್, ಮುಂಬೈನ ಅನಸ್ ಇಕ್ಬಾಲ್ ಶೇಖ್, ದೆಹಲಿಯ ಶಿಯಾನ್ ರಹಮಾನ್ ಅಲಿಯಾಸ್ ಹುಸೇನ್ ಹಾಗೂ ಜಾರ್ಖಂಡ್‌ನ ಮೊಹಮ್ಮದ್ ಶಹಬಾಜ್ ಅಲಿಯಾಸ್ ಜುಲ್ಫಿಕರ್ ಅಲಿಯಾಸ್ ಗುಡ್ಡುನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. `ಕಚ್ಚಾ ಬಾಂಬ್ ತಯಾರಿಸಲು ಶಂಕಿತರು ಸಂಗ್ರಹಿಸಿಟ್ಟುಕೊಂಡಿದ್ದ ಸಲ್ಫರ್, ಪೊಟ್ಯಾಶಿಯಂ ನೈಟ್ರೇಟ್, ಗನ್ ಪೌಡರ್, ಇದ್ದಿಲು, ಎಥೆನಾಲ್, ಚೂಪಾದ ಆಯುಧಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಸ್ಮಾರ್ಟ್ ವಾಚ್‌ಗಳು, ನಗದು ಹಾಗೂ ಕೆಲ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಎನ್‌ಐಎ ಮೂಲಗಳು ಹೇಳಿವೆ.