ಗುಂಡ್ಲುಪೇಟೆ: ಕೇರಳದಲ್ಲಿ ಕೊರೊನಾ ಹೊಸ ಸೋಂಕು ಪತ್ತೆಯಾಗಿ ಸುಮಾರು ಮೂವರು ಸಾವನ್ನಪ್ಪಿದ್ದರು ಸಹ ತಾಲೂಕಿನ ಗಡಿ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆಯಾಗಿ ತಪಾಸಣೆ ಆರಂಭಿಸದೆ ನಿರ್ಲಕ್ಷ್ಯ ವಹಿಸಿದೆ. ಇದು ತಾಲೂಕಿನ ಗಡಿ ಅಂಚಿನ ಜನರಲ್ಲಿ ಆತಂಕ ತಂದೊಡ್ಡಿದೆ.
ಗುಂಡ್ಲುಪೇಟೆ ಮಾರ್ಗವಾಗಿ ಕೇರಳಕ್ಕೆ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ಪ್ರತಿನಿತ್ಯ ಸಾವಿರಾರು ಸರ್ಕಾರಿ ಹಾಗೂ ಗೂಡ್ಸ್ ವಾಹನಗಳು ಸಂಚಾರ ಮಾಡುತ್ತವೆ. ಪಕ್ಷಿ, ಜನ, ಜಾನುವಾರುಗಳಿಗೆ ಯಾವುದೇ ರೀತಿ ಸೋಂಕು ತಗುಲಿದರು ಸಹ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಆರಂಭಿಸಿ, ಪ್ರತಿಯೊಂದು ವಾಹನಗಳಿಗೂ ಸ್ಯಾನಿಟೈಸರ್ ಮಾಡಿ ಪ್ರವೇಶ ನೀಡಲಾಗುತ್ತಿತ್ತು. ಆದರೆ ಇದೀಗ ಕೇರಳದಲ್ಲಿ ಕೊರೊನಾ ಹೊಸ ತಳಿ ಪತ್ತೆಯಾಗಿದ್ದರೂ ಸಹ ಆರೋಗ್ಯ ಇಲಾಖೆ ಸರ್ಕಾರದಿಂದ ಅಧಿಕೃತ ಆದೇಶ ಬಂದಿಲ್ಲ ಎಂದು ತಪಾಸಣೆಗೆ ನಿರ್ಲಕ್ಷ್ಯ ವಹಿಸಿದೆ. ಇದರಿಂದ ರಾಜಾರೋಷವಾಗಿ ತಪಾಸಣೆ ಇಲ್ಲದೆ ಕೇರಳ ವಾಹನಗಳು ರಾಜ್ಯ ಪ್ರವೇಶಿಸುತ್ತಿವೆ.
ತಾಲೂಕಿನಿಂದ ಕೇರಳಕ್ಕೆ ಕೂಲಿ ಕೆಲಸಕ್ಕೆಂದು ಪ್ರತಿನಿತ್ಯ ನೂರಾರು ಮಂದಿ ಹೋಗಿ ಬರುತ್ತಿದ್ದಾರೆ. ಇವರ ಮೇಲು ಸಹ ಆರೋಗ್ಯ ಇಲಾಖೆ ನಿಗಾ ವಹಿಸದೆ ನಿರ್ಲಕ್ಷ್ಯ ಧೋರಣೆ ತಾಳಿದೆ. ಇನ್ನೂ ಈ ಮಧ್ಯೆ ಶಬರಿಮಲೆಗೆ ದಿನಂಪ್ರತಿ ನೂರಾರು ವಾಹನಗಳು ತೆರಳಿ ಮನೆಗೆ ವಾಪಸ್ ಆಗುತ್ತಿದ್ದರು ಸಹ ತಪಾಸಣೆ ಮಾತ್ರ ನಡೆಯುತ್ತಿಲ್ಲ.
ಈ ಕುರಿತು ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಪ್ರತಿಕ್ರಿಯೆ ನೀಡಿ, ಕೇರಳ ಗಡಿಯಲ್ಲಿ ತಪಾಸಣೆ ಆರಂಭಿಸಲು ಇಲ್ಲಿಯ ತನಕ ಇಲಾಖೆಯಿಂದ ಆದೇಶ ಬಂದಿಲ್ಲ. ಆದರೂ ಸಹ ಮೂಲೆಹೊಳೆ ಚೆಕ್ ಪೋಸ್ಟ್‌ಗೆ ಭೇಟಿ ಕೊರೊನಾ ಸೋಂಕಿನ ಕುರಿತು ಪೋಸ್ಟ್ ಅಂಟಿಸಲಾಗಿದೆ. ಜೊತೆಗೆ ಚೆಕ್ ಪೋಸ್ಟ್ ಸಿಬ್ಬಂದಿಗೂ ಎಚ್ಚರಿಕೆಯಿಂದಿರಲು ತಿಳಿಸಲಾಗಿದೆ. ಚೆಕ್ ಅಕ್ಕಪಕ್ಕದ ಗ್ರಾಮಗಳ ಜನರ ಮೇಲೆ ನಿಗಾ ವಹಿಸಲು ಆಯಾಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೂಚನೆ ನೀಡಲಾಗಿದೆ. ಜೊತೆಗೆ ತಾಲೂಕು ಆಸ್ಪತ್ರೆಯಲ್ಲಿಯೂ ಪ್ರತ್ಯೇಕ ವಾರ್ಡ್ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.
ಕೇರಳದಲ್ಲಿ ಕೊರೊನಾ ಹೊಸ ಸೋಂಕಿಗೆ ವ್ಯಕ್ತಿ ಸಾವನ್ನಪ್ಪಿರುವ ಹಿನ್ನೆಲೆ ಗಡಿಭಾಗ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆ ಶೀಘ್ರ ತಪಾಸಣೆ ಆರಂಭಿಸಿ ಹೊಸ ಸೊಂಕು ರಾಜ್ಯ ಪ್ರವೇಶಿಸದಂತೆ ಕ್ರಮ ವಹಿಸಬೇಕು. ಸೋಂಕು ತಗುಲಿದ ನಂತರ ತಪಾಸಣೆ ಬಿಗಿಗೊಳಿಸುವ ಬದಲು ಈಗಲೇ ಮುನ್ನೆಚ್ಚರಿಕೆ ವಹಿಸಲಿ
-ಮಹದೇವಸ್ವಾಮಿ, ಮಾಡ್ರಹಳ್ಳಿ.