ಕೆ.ಆರ್.ಪೇಟೆ : ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಚೊಟ್ಟನಹಳ್ಳಿ ಗ್ರಾಮದಲ್ಲಿರುವ ತಮ್ಮ ಕುಟುಂಬಕ್ಕೆ ಸೇರಿದ ಜಮೀನಿನಲ್ಲಿ ಸುಮಾರು ಏಳು ಲಕ್ಷಕ್ಕೂ ಅಧಿಕ ಮೌಲ್ಯದ ತೇಗದ ಮರಗಳನ್ನು ಕಳ್ಳತನ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ರೈತ ಚೊಟ್ಟನಹಳ್ಳಿ ಗ್ರಾಮದ ಎಸ್.ಶ್ರೀನಿವಾಸ್ ಅವರು ಅರಣ್ಯ ಇಲಾಖೆ, ತಹಸೀಲ್ದಾರ್ ಹಾಗೂ ಪೊಲೀಸರಿಗೆ ದೂರು ನೀಡಿ ಮನವಿ ಮಾಡಿದ್ದಾರೆ.
ಚೊಟ್ಟನಹಳ್ಳಿ ಗ್ರಾಮದ ಸರ್ವೆ ನಂ,೧೯ರಲ್ಲಿ ೬.೨೮ಗುಂಟೆ ಜಮೀನಿನ ಸುತ್ತಲೂ ನೂರಾರು ತೇಗದ ಮರಗಳನ್ನು ನೆಟ್ಟು ಸುಮಾರು ೨೫ವರ್ಷಗಳಿಂದಲೂ ಕಾಪಾಡಿಕೊಂಡು ಬರಲಾಗಿತ್ತು. ಆದರೆ ಮೊನ್ನೆ ನಮ್ಮ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿರುವ ಇದೇ ಚೊಟ್ಟನಹಳ್ಳಿ ಗ್ರಾಮದ ನಿವಾಸಿಗಳಾದ ಸಿಂಗೇಗೌಡ, ವಿಷ್ಣು, ರಾಜೇಗೌಡ ಮತ್ತಿತರರು ಜಮೀನಿನಲ್ಲಿದ್ದ ಸುಮಾರು ಏಳು ಲಕ್ಷ ರೂಗಳಿಗೂ ಹೆಚ್ಚು ಬೆಲೆ ಬಾಳುವ ಸುಮಾರು ೧೫೦ ತೇಗದ ಮರಗಳನ್ನು ಕುಯ್ದು ಟ್ರಾಕ್ಟರ್ ಮೂಲಕ ಕಳ್ಳತನ ಮಾಡಿಕೊಂಡು ಬೇರೆಯವರ ಜಮೀನಿನಲ್ಲಿ ದಾಸ್ತಾನು ಮಾಡಿರುತ್ತಾರೆ. ಇದನ್ನು ಪ್ರಶ್ನೆ ಮಾಡಿದ ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆ. ಹಾಗಾಗಿ ಮೇಲ್ಕಂಡ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ನ್ಯಾಯ ಕೊಡಿಸಬೇಕು ಎಂದು ಎಸ್.ಶ್ರೀನಿವಾಸ್ ಅವರು ಪೊಲೀಸರು, ಅರಣ್ಯ ಇಲಾಖೆ ಹಾಗೂ ತಹಸೀಲ್ದಾರ್ ಅವರಿಗೆ ನೀಡಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಪೋಲೀಸರ ಅಸಹಕಾರ ಆರೋಪ: ನಮ್ಮ ಜಮೀನಿನಲ್ಲಿ ಎರಡು ಭಾರಿ ತೇಗದ ಮರಗಳನ್ನು ಕಡಿಯುತ್ತಿರುವುದನ್ನು ತಡೆದು ಸಾಗಿಸುತ್ತಿರುವ ಬಗ್ಗೆ ಕೆ.ಆರ್.ಪೇಟೆ ಟೌನ್ ಪೊಲೀಸರಿಗೆ ದೂರು ನೀಡಿದರೂ ಸಹ ಕನಿಷ್ಠ ಪಕ್ಷ ಮರಗಳ್ಳರನ್ನು ಮರ ಸಾಗಿಸುವುದನ್ನು ತಡೆದು ದಾಸ್ತಾನು ಮಾಡಲಾಗಿದ್ದ ಮರಗಳನ್ನು ವಶಕ್ಕೆ ಪಡೆಯದೇ ಇರುವ ಕಾರಣ ಲಕ್ಷಾಂತರ ರೂ ಮೌಲ್ಯದ ಮರಗಳನ್ನು ಹೊರ ಸಾಗಿಸಿದ್ದು ಇದರಿಂದ ನನಗೆ ಸುಮಾರು ಏಳೆಂಟು ಲಕ್ಷ ರೂಪಾಯಿಗಳ ನಷ್ಟವಾಗಿದೆ ಇದಕ್ಕೆ ಪೊಲೀಸರ ನಿರ್ಲಕ್ಷವೇ ಕಾರಣವಾಗಿದೆ ಎಂದು ರೈತ ಕೆ.ಎಸ್.ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ.