ನಾಲವಾರ: ಇತ್ತೀಚಿಗೆ ಚಿತ್ತಾಪುರ ತಾಲೂಕಿನ ಹಲಕಟ್ಟಾ ಗ್ರಾಮದ ಬಳಿ ನಡೆದ ಭೀಕರ ಅಪಘಾತದಲ್ಲಿ ಮಡಿದವರ ಕುಟುಂಬ ವರ್ಗದವರನ್ನು ನಾಲವಾರ ಗ್ರಾಮದ ಅವರ ಮನೆಯಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಇಂದು ಭೇಟಿ ನೀಡಿ ಸಾಂತ್ವಾನ ಹೇಳಿದರು.
ಘಟನೆ ಕುರಿತಂತೆ ಈಗಾಗಲೇ ಸಿಎಂ ಅವರೊಂದಿಗೆ ಮಾತನಾಡಿದ್ದು, ಸಿಎಂ ಪರಿಹಾರ ನಿಧಿಯಿಂದ ಪರಿಹಾರ ದೊರಕಿಸಿಕೊಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವರು ಕುಟುಂಬ ವರ್ಗದವರಿಗೆ ಭರವಸೆ ನೀಡಿದರು.
ಕಳೆದ ತಿಂಗಳು ಲಾರಿ ಹಾಗೂ ಟಂ ಟಂ ಆಟೋ ನಡುವೆ ಹಲಕಟ್ಟಾ ಬಳಿ ನಡೆದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರು.
ಪಡಿತರ ಚೀಟಿಯಲ್ಲಿ ಮಕ್ಕಳ ಹೆಸರು ಸೇರ್ಪಡೆ ಮಾಡಲು ಚಿತ್ತಾಪುರಕ್ಕೆ ಹೋಗಿ ವಾಪಸ್ ಬರುವ ವೇಳೆ ಅಪಘಾತ ನಡೆದಿತ್ತು.
ನಾಲವಾರ ಗ್ರಾಮದ ನಿವಾಸಿಗಳಾದ ನಜ್ಮಿನ್ ಬೇಗಂ (28), ಬೀಬಿ ಫಾತಿಮಾ(12), ಅಬೂಬಕ್ಕರ್(4), ಬೀಬಿ ಮರಿಯಮ್( 3 ತಿಂಗಳು), ಮುಹಮ್ಮ ದ್ ಪಾಷಾ, 20) ಹಾಗೂ ಆಟೋ ಚಾಲಕ ಬಾಬಾ(35) ಸ್ಥಳದಲ್ಲಿಯೇ ಮೃತಪಟ್ಟಿದ್ದು, 10 ವರ್ಷದ ಬಾಲಕ ಮಹಮ್ಮದ್ ಹುಸೇನ್ ಗಂಭೀರ ಗಾಯಗೊಂಡಿದ್ದರು.