ನಾಗಮಂಗಲ : ಕೃಷಿಯಲ್ಲಿ ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಕ್ರಾಂತಿಕಾರಿ ಬದಲಾವಣೆ ಆಗಬೇಕಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ರೈತರಿಗೆ ಸಲಹೆ ನೀಡಿದರು. ತಾಲೂಕಿನ ಬೆಳ್ಳೂರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ರೈತ ದಿನಾಚರಣೆ, ಕೃಷಿಮೇಳ ಹಾಗೂ ಯುವ ರೈತರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,
ಕೃಷಿ ಅವಲಂಬಿತ ಪ್ರದೇಶಗಳಲ್ಲಿ ಇಂದಿನ ಕೃಷಿ ಮಾದರಿ ಪದ್ಧತಿಗಳನ್ನು ಅಳವಡಿಸಿಕೊಂಡು ಜಮೀನಿನಲ್ಲಿ ಹೆಚ್ಚಿನ ಇಳುವರಿ ಹಾಗೂ ಎಲ್ಲಾ ರೀತಿಯ ಬೆಳೆಗಳನ್ನು ಬೆಳೆಯಬೇಕೆಂದು ತಿಳಿಸಿದರು. ಈ ಭಾಗದ ರೈತರಿಗೆ ಉತ್ತರ ಕನ್ನಡ ಮಾದರಿಯಲ್ಲಿ ಹೆಚ್ಚು ಇಳುವರಿ ಬೆಳೆಗಳನ್ನು ಬೆಳೆಯಲು ಮಾಹಿತಿ ಪಡೆಯಲು ರೈತರಿಗೆ ಸರ್ಕಾರದಿಂದ ಉಚಿತವಾಗಿ ಪ್ರವಾಸ ಮಾಡಿಸಲಾಗುವುದು ಎಂದು ತಿಳಿಸಿದರು.
ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ವ್ಯವಸಾಯ ಪದ್ದತಿಯನ್ನು ಬದಲಾವಣೆ ಮಾಡಿಕೊಂಡು ಕೃಷಿ ಚಟುವಟಿಕೆಯನ್ನು ರೈತಾಪಿ ವರ್ಗದವರು ಅಳವಡಿಸಿಕೊಳ್ಳಬೇಕು. ಇದೇ ನಿಟ್ಟಿನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿರವರು ರೈತರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು ಅವರ ಆಶಯದಂತೆ ಕೃಷಿ ಕಾಲೇಜು ತೆರೆಯಲು ಅನುಮತಿ ದೊರೆತಿದ್ದು, ಶೀಘ್ರದಲ್ಲಿ ತೆರೆಯಲಾಗುವುದು ಎಂದು ವೇದಿಕೆಯಲ್ಲಿ ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ ನಿರ್ಮಲಾನಂದನಾಥ ಸ್ವಾಮೀಜಿ, ಕೃಷಿ ಸಚಿವ ಚಲುವರಾಯಸ್ವಾಮಿಯವರನ್ನು ಪೂರ್ಣ ಕುಂಭ ಸಮೇತ ಸ್ವಾಗತ ಕೋರಿ ವೇದಿಕೆಗೆ ಕರೆ ತರಲಾಯಿತು. ತಾಲೂಕಿನ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ಐದು ಯುವ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯುವ ರೈತ ಸೇನೆ ರಾಜ್ಯಾಧ್ಯಕ್ಷ ಕೆ ಎಂ ಲೋಹಿತಗೌಡ, ಪ್ರಜಾ ಟ್ರಸ್ಟ್ ಅಧ್ಯಕ್ಷರಾದ ಮೋಹನ ಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮೂಡ್ಲಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್ ಜೆ ರಾಜೇಶ್, ಎನ್ ಟಿ ಕೃಷ್ಣಮೂರ್ತಿ, ಬೆಳ್ಳೂರು ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಯಾಸಿನ್, ಹಲವಾರು ರೈತ ಮುಖಂಡರು ಭಾಗವಹಿಸಿದ್ದರು.
ಹವಾಮಾನ ಮತ್ತು ಪರಿಸರ ಬದಲಾವಣೆ ತಕ್ಕಂತೆ ರೈತರು ತಮ್ಮ ಬೆಳೆಗಳನ್ನು ಬೆಳೆಯಬೇಕು ಬೆಳೆಯ ಜೊತೆಗೆ ಉಪ ಬೆಳೆಗಳನ್ನು ಬೆಳೆದು ಅಭಿವೃದ್ಧಿ ಹೊಂದಬೇಕು.
-ದರ್ಶನ್ ಪುಟ್ಟಣ್ಣಯ್ಯ, ಶಾಸಕ