Saturday, April 19, 2025
Google search engine

Homeರಾಜ್ಯಸುದ್ದಿಜಾಲಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ವತಿಯಿಂದ "ಜಿಲ್ಲಾಧಿಕಾರಿ ಕಚೇರಿ ಚಲೋ" ಕಾರ್ಯಕ್ರಮ

ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ವತಿಯಿಂದ “ಜಿಲ್ಲಾಧಿಕಾರಿ ಕಚೇರಿ ಚಲೋ” ಕಾರ್ಯಕ್ರಮ

ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರ, ದುಡಿಯುವ ಜನರು ಸೇರಿದಂತೆ ಸರ್ವಜನರ ಅಭಿವೃದ್ದಿಗೆ ಆಗ್ರಹಿಸಿ ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಹಮ್ಮಿಕೊಂಡ “ಜಿಲ್ಲಾಧಿಕಾರಿ ಕಚೇರಿ ಚಲೋ” ಕಾರ್ಯಕ್ರಮ ಮಂಗಳೂರು ನಗರದಲ್ಲಿ ಇಂದು ನಡೆಯಿತು. ಮಹಿಳೆಯರೂ ಸೇರಿದಂತೆ ಬೃಹತ್ ಸಂಖ್ಯೆಯ ಜನರು ಅಂಬೇಡ್ಕರ್ ವೃತ್ತದಿಂದ ಮೆರವಣಿಯಲ್ಲಿ ಸಾಗಿ ಮಿನಿ ವಿಧಾನ ಸೌಧದ ಮುಂಭಾಗ ಬಹಿರಂಗ ಸಭೆ ನಡೆಸಿದರು. ಒಂದು ಕಿಲೋ ಮೀಟರ್ ಗೂ ಹೆಚ್ಚು ಉದ್ದ ಇದ್ದ ಮೆರವಣಿಗೆಯಲ್ಲಿ ಕಾರ್ಯಕರ್ತರು ಬಿಜೆಪಿ ವೈಫಲ್ಯಗಳನ್ನು ತೆರೆದಿಡುವ ಘೋಷಣೆಗಳನ್ನು ಲಯಬದ್ದವಾಗಿ ಕೂಗುತ್ತಾ ಸಾಗುತ್ತಿರುವುದು ಸಾರ್ವಜನಿಕರ ಗಮನ ಸೆಳೆಯಿತು.
ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಸತತ ಒಂಬತ್ತು ಭಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೆದ್ದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಆಡಳಿತ ಮೂರುವರೆ ದಶಕಗಳಿಂದ ಬಿಜೆಪಿ ಹಿಡಿತದಲ್ಲಿದೆ. ಈ ಅವಧಿಯಲ್ಲಿ ಜನಸಾಮಾನ್ಯರ ಪ್ರಶ್ನೆಗಳು ಪೂರ್ತಿಯಾಗಿ ಕಡೆಗಣಿಸಲ್ಪಟ್ಟು ಇಲ್ಲಿನ ಜನಸಾಮಾನ್ಯರ ಬದುಕು ನಲುಗಿ ಹೋಗಿದೆ ಎಂದು ಆರೋಪಿಸಿದರು.
ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ, ಜಿಲ್ಲೆಯ ಅಭಿವೃದ್ಧಿ ಹೀನತೆ, ಅರಾಜಕತೆಗೆ ಸಂಸದ ನಳಿನ್ ಕುಮಾರ್ ಕಟೀಲ್ ರ ವೈಫಲ್ಯವೇ ಕಾರಣ ಎಂದು ಬಿಜೆಪಿ ಪರಿವಾರದ ಒಂದು ಗುಂಪು ಪ್ರಚಾರ ಮಾಡುವ ಮೂಲಕ ವೈಫಲ್ಯದಲ್ಲಿ ಬಿಜೆಪಿ ಪಕ್ಷದ ಪಾತ್ರವನ್ನು ಮರೆಮಾಚಲು ಯತ್ನಿಸುತ್ತಿದ್ದಾರೆ. ಆದರೆ, ವಿಷಯ ಅಷ್ಟು ಸರಳ ಅಲ್ಲ, ಧನಂಜಯ ಕುಮಾರ್, ಸದಾನಂದ ಗೌಡ ಸೇರಿದಂತೆ ಮೂರು ದಶಕಗಳ ಕಾಲ ಬಿಜೆಪಿ ಜನಪ್ರತಿನಿಧಿಗಳ ದುರಾಡಳಿತವೇ ತುಳುನಾಡಿನ ಇಂದಿನ ದುಸ್ಥಿತಿಗೆ ಕಾರಣ. ಜಿಲ್ಲೆಯನ್ನು ಪೂರ್ತಿಯಾಗಿ ಆರೋಗ್ಯ , ಶಿಕ್ಷಣ, ರಿಯಲ್ ಎಸ್ಟೇಟ್ ಸೇರಿದಂತೆ ಬಲಾಢ್ಯ ಲಾಭಿಗಳ ಪದತಲಕ್ಕೆ ಒಪ್ಪಿಸಿದ್ದರಲ್ಲಿ ಬಿಜೆಪಿ ಸಂಸದ, ಶಾಸಕರ ಪಾತ್ರವೆ ದೊಡ್ಡದು.

ಮತೀಯ ಅಜೆಂಡಾ ಮುಂದಿಟ್ಟು ಜನಸಾಮಾನ್ಯರನ್ನು ಮರಳು ಮಾಡಿ ಮತಪಡೆದು, ಬಲಾಢ್ಯ ಲಾಬಿಗಳ ಸೇವೆಯನ್ನು ನಿಷ್ಟೆಯಿಂದ ಮಾಡುವುದರಲ್ಲಿ ಬಿಜೆಪಿ ಪಳಗಿದೆ. ಬಿಜೆಪಿ ಸಂಸದ, ಶಾಸಕರ ಸುತ್ತ ಮುತ್ತ, ಬಿಜೆಪಿಯ ಸಭೆಗಳಲ್ಲಿ ಲಕ್ಷ, ಕೋಟಿ ರೂ ಮೌಲ್ಯದ ಕಾರುಗಳಲ್ಲಿ ಓಡಾಡುವರೆ ತುಂಬಿಕೊಂಡಿದ್ದಾರೆ. ಮತ ನೀಡಿದ ಜನಸಾಮಾನ್ಯರು ಬೀದಿಗೆ ಬಂದಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ದುಡ್ಡಿನ ಚೀಲ ಇಲ್ಲದವರಿಗೆ , ಶಿಕ್ಷಣ ಸಂಸ್ಥೆಗಳಲ್ಲಿ ಜನಸಾಮಾನ್ಯರ ಮಕ್ಕಳಿಗೆ ಪ್ರವೇಶ ಇಲ್ಲ, ಸರಕಾರಿ ಕಾಲೇಜು, ಆಸ್ಪತ್ರೆಗಳು ಬಾಗಿಲು ಮುಚ್ಚುತ್ತಿವೆ, ಜಿಲ್ಲೆಯ ಕೈಗಾರಿಕೆ, ಉದ್ಯಮಗಳಲ್ಲಿ ಸ್ಥಳೀಯ ಯುವಜನರನ್ನು ಉದ್ಯೋಗ ನೀಡದೆ ಹೊರದಬ್ಬಲಾಗುತ್ತಿದೆ. ಬಿಜೆಪಿ ಅಡಳಿತದ ನಗರ ಪಾಲಿಕೆಯಂತೂ ಭ್ರಷ್ಟಾಚಾರದ ಕೊಂಪೆಯಾಗಿದೆ. ಒಂದು ಕಾಲಕ್ಕೆ ಪ್ರಗತಿಪಥದಲ್ಲಿದ್ದ ಜಿಲ್ಲೆ ಇಂದು ಹತಾಶ ಸ್ಥಿತಿಗೆ ತಳ್ಳಲ್ಪಟ್ಟಿದೆ.

ಬಿಜೆಪಿಯನ್ನು ಸೋಲಿಸದೆ ಜಿಲ್ಲೆ ಸಮಗ್ರ ಅಭಿವೃದ್ದಿಯ ಕಡೆಗೆ ಚಲಿಸಲು ಸಾಧ್ಯವೇ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನಸಾಮಾನ್ಯರು ಬಿಜೆಪಿಯ ಜನವಿರೋಧಿ ರಾಜಕಾರಣವನ್ನು ಸೋಲಿಸಲು ಒಂದಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ವಸಂತ ಆಚಾರಿ, ಜಿಲ್ಲಾ ಸಮಿತಿ ಸದಸ್ಯರಾದ ಡಾ.ಕೃಷ್ಣಪ್ಪ ಕೊಂಚಾಡಿ, ಜಯಂತಿ ಶೆಟ್ಟಿ ಸಭೆಯನ್ನುದ್ದೇಶಿಸಿ ಮಾತನಾಡಿದರು‌. ಜೆ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುನಿಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು, ಸಂತೋಷ್ ಬಜಾಲ್ ವಂದಿಸಿದರು.

RELATED ARTICLES
- Advertisment -
Google search engine

Most Popular