ಪಿರಿಯಾಪಟ್ಟಣ: ತಾಲೂಕಿನ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆರಿಗೆ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಆದರೆ ಹಿಂದಿನ ಶಾಸಕರ ನಿರುತ್ಸಾಹದಿಂದ ಈ ಅವಕಾಶ ಕೈ ತಪ್ಪಿತು ಎಂದು ಪಶುಸಂಗೋಪನಾ ಮತ್ತು ರೇಷ್ಮೆ ಖಾತೆ ಸಚಿವ ಕೆ.ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಜನರ ಆರೋಗ್ಯ ರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ 100 ಹಾಸಿಗೆಯ ಆಸ್ಪತ್ರೆ ಮಂಜೂರು ಮಾಡಿ ಹೆರಿಗೆ ಆಸ್ಪತ್ರೆ ಸ್ಥಾಪನೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು ಆದರೆ ಹಿಂದಿನ ಶಾಸಕರ ನಿರುತ್ಸಾಹದಿಂದ ಈ ಅವಕಾಶ ಬೇರೆ ತಾಲೂಕಿಗೆ ವರ್ಗಾವಣೆಗೊಳ್ಳುವಂತಾಯಿತು ಇದು ಬೇಸರದ ಸಂಗತಿ ಹಾಗಾಗಿ ಇಂದಿನ ಅಧಿಕಾರಿಗಳು ಜನರ ಆರೋಗ್ಯ ರಕ್ಷಣೆ ಹಾಗೂ ಹೆರಿಗೆಗೆ ಬರುವವರಿಗೆ ಯಾವುದೇ ರೀತಿಯ ಸಾಬೂಬು ಹೇಳದೆ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಹೆರಿಗೆ ಮಾಡಿದರೆ ಮತ್ತೊಮ್ಮೆ ಹೆರಿಗೆ ಆಸ್ಪತ್ರೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಪಿರಿಯಾಪಟ್ಟಣ ಬರ ಪೀಡಿತ ಪ್ರದೇಶ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪರಿಹಾರ ವಿತರಿಸುವ ಸಂದರ್ಭದಲ್ಲಿ ಯಾವುದೇ ರೈತರಿಗೆ ಲೋಪವಾಗದಂತೆ ವಿತರಿಸಬೇಕು , ತಾಲ್ಲೂಕಿನಲ್ಲಿ ಅನೇಕ ಬಾರ್ ಗಳಿಂದ ನೇರವಾಗಿ ಗ್ರಾಮಾಂತರ ಪ್ರದೇಶಕ್ಕೆ ಅಕ್ರಮ ಮದ್ಯ ಸರಬರಾಜು ಆಗುತ್ತಿದೆ ಇದರ ಬಗ್ಗೆ ಕ್ರಮ ಕೈಗೊಳ್ಳದ್ದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಬಕಾರಿ ನಿರೀಕ್ಷಕ ಧರ್ಮರಾಜ್ ಅವರಿಗೆ ಎಚ್ಚರಿಕೆ ನೀಡಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ಮಾತನಾಡಿ ತಾಲ್ಲೂಕಿನಲ್ಲಿ ಬರ ಪರಿಹಾರ ಪಡೆಯಲು 70 ಸಾವಿರ ರೈತರು ನೊಂದಣಿ ಮಾಡಿಸಿಕೊಂಡಿದ್ದು, ಅನೇಕ ರೈತರು ಪೌತಿ ಖಾತೆ ಸಮಸ್ಯೆಯಿಂದ ಪರಿಹಾರ ಪಡೆಯಲು ಸಾಧ್ಯವಾಗುತ್ತಿಲ್ಲ, ಹಿಂಗಾರು ಕುಂಟಿತವಾಗಿರುವ ಹಿನ್ನೆಲೆಯಲ್ಲಿ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ ಆದರೂ ಮುಸುಕಿನ ಜೋಳ, ರಾಗಿ, ಅವರೆ, ಅಲಸಂದೆ ಸೇರಿದಂತೆ ಅನೇಕ ದ್ವಿದಳ ಧಾನ್ಯಗಳನ್ನು ಬೆಳೆಯಲಾಗಿದೆ ಎಂದರು

ತಾಪಂ ಇಓ ಸುನಿಲ್ ಕುಮಾರ್ ಮಾತನಾಡಿ ಪ್ರತಿ ಗ್ರಾಮದಲ್ಲೂ ಪಿಡಿಒಗಳು ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರ ವಹಿಸಬೇಕು. ಶುದ್ಧ ಕುಡಿಯುವ ನೀರು ಘಟಕಗಳ ನಿರ್ವಹಣೆಗೆ ಹೆಚ್ಚು ಗಮನ ನೀಡಬೇಕು.
ಪ್ರತಿ ಗ್ರಾಪಂ ಮಟ್ಟದಲ್ಲಿ ಮನೆ ಅಗತ್ಯವಿರುವ ಕುಟುಂಬಗಳ ಪಟ್ಟಿ ಸಿದ್ಧಪಡಿಸಬೇಕು. ನರೇಗಾ ಯೋಜನೆ ಕಾಮಗಾರಿ ಕೈಗೊಳ್ಳುವ ಮುನ್ನ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಬೇಕು. ಕಾಮಗಾರಿ ಗುಣಮಟ್ಟದ ಬಗ್ಗೆ ರಾಜಿ ಮಾಡಿಕೊಳ್ಳಬಾರದು ಎಂದರು.
ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಕಾಲಕಾಲಕ್ಕೆ ಸರಿಯಾಗಿ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಗದಿತವಾಗಿ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಕುಂದುಕೊರತೆ ವಿಚಾರಿಸಬೇಕು ಎಂದರು.
ಈ ಸಂದರ್ಭದಲ್ಲಿ ರೇಷ್ಮೆ, ಶಿಕ್ಷಣ, ಅಬಕಾರಿ, ಅರಣ್ಯ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ತಹಶೀಲ್ದಾರ್ ಕುಂಞಿ ಅಹಮದ್, ಪಶುಪಾಲನಾ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಹಾಗೂ ನೂಡಲ್ ಅಧಿಕಾರಿ ನಾಗರಾಜ್, ಹಾರಂಗಿ ನೀರಾವರಿ ನಿಗಮದ ಸುಪರ್ಡೆಂಟ್ ಇಂಜಿನಿಯರಿಂಗ್ ರಘುಪತಿ, ವಿವಿಧ ಇಲಾಖೆಗಳ ಅಧಿಕಾರಿಗಳಾದ ವೆಂಕಟೇಶ್, ದಿನೇಶ್, ಪ್ರಸನ್ನ, ಸೋಮಯ್ಯ, ಕೃಷ್ಣಮೂರ್ತಿ, ಮಾದೇಶ್, ಶ್ರೀಧರ್, ಚಂದ್ರಶೇಖರ್, ಬಸವರಾಜು, ಮಲ್ಲಿಕಾರ್ಜುನ, ಕಿರಣ್ ಕುಮಾರ್, ಮಮತಾ, ದರ್ಶನ್ ರಾಮಚಂದ್ರ, ಗುರುಬಸವ ಲಿಂಗಸ್ವಾಮಿ, ಮುನಿಯಪ್ಪ, ಅನಿಲ್ ಕುಮಾರ್, ಹಿತೇಶ್, ಪುಷ್ಪಲತಾ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.