ಮೈಸೂರು : ಸಂಸತ್ ಭವನದಲ್ಲಿ ಕಲಾಪದ ವೇಳೆ ನುಸುಳಿ ಭಧ್ರತಾ ಲೋಪ ಎಸಗಿದ ಆರೋಪದಲ್ಲಿ ಬಂಧನವಾಗಿರುವ ಮೈಸೂರಿನ ಮನೋರಂಜನ್ ಅವರ ಪೋಷಕರನ್ನು ದೆಹಲಿ ಪೊಲೀಸರು ಎರಡನೇ ದಿನವೂ ವಿಚಾರಣೆ ನಡೆಸಿ ಹೇಳಿಕೆಗಳನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ವಿಜಯನಗರದ ಎರಡನೇ ಹಂತದಲ್ಲಿರುವ ಮನೋರಂಜನ್ ನಿವಾಸಕ್ಕೆ ಓರ್ವ ಹಿರಿಯ ಅಧಿಕಾರಿ ಇಬ್ಬರು ಸಹಾಯಕರು, ಓರ್ವ ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ವಿಚಾರಣೆ ನಡೆಸಿದರು.
ಮನೋರಂಜನ್ ತಂದೆ ದೇವೇರಾಜೇಗೌಡ, ತಾಯಿ ಮತ್ತು ಸಹೋದರಿಯನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಿದ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿ ದಾಖಲು ಮಾಡಿದರು. ಎರಡನೇ ಮಹಡಿಯಲ್ಲಿರುವ ಮನೋರಂಜನ್ ಕೊಠಡಿಯನ್ನು ಪೊಲೀಸರು ಮಹಜರು ನಡೆಸಿದರು. ಇದೇ ವೇಳೆ ಮನೋರಂಜನ್ ಪಾಸ್‌ಪೋರ್ಟ್ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ವಿಚಾರಣೆ ವೇಳೆ ಮನೋರಂಜನ್ ಮತ್ತು ತಂದೆ ದೇವರಾಜೇಗೌಡರ ಹಣದ ಮೂಲ, ಮನೆಯಲ್ಲಿ ಆತನ ವರ್ತನೆ ಯಾವ ರೀತಿ ಇತ್ತು. ಭೇಟಿ ಮಾಡಲು ಬರುತ್ತಿದ್ದ ಸ್ನೇಹಿತರು, ಮೊಬೈಲ್ ಮೂಲಕ ಯಾರೊಂದಿಗೆ ಮಾತಾಡುತ್ತಿದ್ದ ಎಂಬಿತ್ಯಾದಿ ಮಾಹಿತಿಗಳನ್ನು ಪಡೆದಿದ್ದಾರೆ.
ಮಾಧ್ಯಮದ ಮುಂದೆ ಹೇಳಿಕೆ ಕೊಡದಂತೆ ಹಾಗೂ ಯಾವುದೇ ಮಾಹಿತಿಯನ್ನು ಗೌಪ್ಯವಾಗಿ ಇರಿಸದೇ ತನಿಖೆ ಸಹಕಾರ ನೀಡುವಂತೆ ಪೊಲೀಸರು ದೇವರಾಜೇಗೌಡ ಅವರಿಗೆ ತಿಳಿಸಿದ್ದಾರೆ. ವಿಚಾರಣೆ ವೇಳೆ ಮೈಸೂರು ಗುಪ್ತಚರ ಇಲಾಖೆ ಅಧಿಕಾರಿಗಳು ಇದ್ದರು.