ಕೊಪ್ಪಳ : ಬೆಂಗಳೂರಿನ ಆರೋಗ್ಯ ಸೌಧದಲ್ಲಿ ನಡೆದ ರಾಜ್ಯ ಮಟ್ಟದ ಎಚ್.ಐ.ವಿ/ಏಡ್ಸ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ಬೇವೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ(ಬಿಸಿ-378) ವಿದ್ಯಾರ್ಥಿನಿಯರಾದ ಸಂಗಮೇಶ್ವರಿ ಹಾಗೂ ಪ್ರಿಯಾಂಕಾ ಅವರು ಪ್ರಥಮ ಸ್ಥಾನ ಪಡೆದು, ಡಿ. 21 ರಂದು ಮುಂಬೈನಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಆರೋಗ್ಯ ಇಲಾಖೆ, ಡ್ಯಾಪ್ಕೋ ವಿಭಾಗ ಹಾಗೂ ಜಿಲ್ಲೆಗೆ ಗೌರವ ತಂದಿದ್ದಾರೆ. ವಿದ್ಯಾರ್ಥಿನಿಯರು ಕೊಪ್ಪಳ ಜಿಲ್ಲಾ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿಯರಿಗೆ ರೂ.15000 ಗಳ ನಗದು, ಟ್ರೋಫಿ ಮತ್ತು ಪ್ರಮಾಣ ಪತ್ರವನ್ನು ನೀಡಿ ಆರೋಗ್ಯ ಇಲಾಖೆಯಿಂದ ಗೌರವಿಸಲಾಯಿತು.
ಒಟ್ಟು 18 ಸುತ್ತುಗಳಲ್ಲಿ ನಡೆದ ಸ್ಫರ್ಧೆಯಲ್ಲಿ ಅತ್ಯುತ್ತಮ 6 ಜಿಲ್ಲೆಗಳನ್ನು ಆಯ್ಕೆ ಮಾಡಿ ಅಂತಿಮ ಹಂತದಲ್ಲಿ ಋಣಾತ್ಮಕ ಅಂಕಗಳೊAದಿಗೆ ಸ್ಪರ್ಧೆ ನಡೆಸಲಾಯಿತು. ಎಲ್ಲ ಹಂತದಲ್ಲೂ ಜಿಲ್ಲೆಯ ವಿದ್ಯಾರ್ಥಿನಿಯರು ಅತ್ಯುತ್ತಮವಾಗಿ ಸ್ಪರ್ಧಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ರಸಪ್ರಶ್ನೆಗೆ ಭಾಗವಹಿಸಲು ಮೂಲ ಸೌಕರ್ಯ ಒದಗಿಸಿ ಸದಾ ಸ್ಫೂರ್ತಿ, ಸಹಕಾರ ನೀಡಿ ಖುದ್ದಾಗಿ ವಿದ್ಯಾರ್ಥಿನಿಯರನ್ನು ಬೆಂಗಳೂರಿಗೆ ಕರೆದೊಯ್ದ ಪ್ರಾಚಾರ್ಯರಾದ ನಾಗಲಕ್ಷ್ಮೀ ಮಿಸ್ಕಿನ್ ಅವರಿಗೆ ಹಾಗೂ ವಿಜೇತ ವಿದ್ಯಾರ್ಥಿನಿಯರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಲಿಂಗರಾಜು ಟಿ. ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿಗಳಾದ ಡಾ.ಶಶಿಧರ ಎ. ರವರು ಆರೋಗ್ಯ ಇಲಾಖೆ ಪರವಾಗಿ ಅಭಿನಂದಿಸಿದ್ದಾರೆ.

ಸ್ಪರ್ಧೆ ತಯಾರಿಗಾಗಿ ವಿದ್ಯಾರ್ಥಿಗಳಿಗೆ ಮಾಗದರ್ಶನ ನೀಡಿದ ಜಿಲ್ಲಾ ಮೇಲ್ವಿಚಾರಕ ಮಾಲತೇಶ ಸಜ್ಜನರ, ಆಪ್ತ ಸಮಾಲೋಚಕ ಅಮರೇಶ ಅಂಗಡಿ, ಪಲ್ಲವಿ ದೇಸಾಯಿ ಯವರಿಗೆ ಪ್ರಾಚಾರ್ಯರಾದ ನಾಗಲಕ್ಷ್ಮೀ ಮಿಸ್ಕಿನ್ ರವರು ಧನ್ಯವಾದಗಳನ್ನು ತಿಳಿಸಿರುತ್ತಾರೆ.