ಬಳ್ಳಾರಿ: ಗರ್ಭಿಣಿ, ಚಿಕ್ಕ ಮಕ್ಕಳ ತಪಾಸಣೆಗಾಗಿ ತಜ್ಞ ವೈದ್ಯರ ಮೂಲಕ ನೀಡುವ ಸೇವೆಯನ್ನು ಅವರ ವಸತಿ ಪ್ರದೇಶದಲ್ಲಿಯೇ ಒದಗಿಸಲು ಸರ್ಕಾರದ ವಿನೂತನ ಯೋಜನೆಯಾದ ಆಯುಷ್ಮತಿ ಕ್ಲಿನಿಕ್‍ಗಳ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಅಗತ್ಯ ಮುತವರ್ಜಿ ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ ಅವರು ವೈದ್ಯಾಧಿಕಾರಿಗಳಿಗೆ ಕರೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್‍ನ ನಜೀರ್ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಆರೋಗ್ಯ ಸಂಘದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರದ ಪ್ರದೇಶಗಳಾದ ಮಿಲ್ಲರ್‍ಪೇಟ್ ಹಾಗೂ ಬ್ರೂಸ್‍ಪೇಟ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈಗಾಗಲೇ ಒಡಂಬಡಿಕೆಯಂತೆ ತಜ್ಞವೈದ್ಯರು ಪ್ರತಿದಿನ ಎರಡು ಗಂಟೆಗಳ ಕಾಲ ಸೇವೆಯನ್ನು ಒದಗಿಸುತ್ತಿದ್ದಾರೆ. ಈ ಸೇವೆಯನ್ನು ಸಾಧ್ಯವಿರುವ ಎಲ್ಲಾ ಪ್ರಸೂತಿ ತಜ್ಞರು, ಮಕ್ಕಳ ತಜ್ಞರು, ಚರ್ಮರೋಗ ತಜ್ಞರು, ಎಲುಬು ಕೀಲು ತಜ್ಞರು, ಕಣ್ಣಿನ ತಜ್ಞರು, ಕಿವಿ ಮೂಗು ಗಂಟಲು ತಜ್ಞರು ಹಾಗೂ ಶಸ್ತ್ರಚಿಕಿತ್ಸಾ ತಜ್ಞರು ಕನ್ಸಲ್ಟೇಶನ್ ಆಧಾರದಡಿ ನಿಯಮಾನುಸಾರ ನೇಮಕ ಮಾಡಿಕೊಂಡು ಹೆಚ್ಚಿನ ಸೇವೆ ನೀಡಬೇಕು ಎಂದು ತಿಳಿಸಿದರು.
ನಗರ ಮತ್ತು ಗ್ರಾಮೀಣ ಭಾಗದಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಮಧುಮೇಹ ಮತ್ತು ರಕ್ತದೊತ್ತಡ ಪರೀಕ್ಷೆ ತಪಾಸಣೆ ನಡೆಸಲು ಸೂಕ್ತ ಕಾರ್ಯಯೋಜನೆ ಮಾಡಿಕೊಳ್ಳಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಷಯರೋಗ ನಿರ್ಮೂಲನೆಗೆ ಮತ್ತು ಕ್ಷಯಮುಕ್ತ ಗ್ರಾಮ ಪಂಚಾಯತಿ ಘೋಷಣೆಗಾಗಿ ಎಲ್ಲಾ ಇಲಾಖೆಗಳ ಸಹಕಾರ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅನೀಮಿಯ ಮುಕ್ತ ಪೌಷ್ಟಿಕ ಕರ್ನಾಟಕದಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಕ್ತಹೀನತೆ ತಪಾಸಣಾ ಶಿಬಿರಗಳನ್ನು ಪರಿಣಾಮಕಾರಿಗೊಳಿಸಬೇಕು. ಕಡಿಮೆ ಹೆಚ್‍ಬಿ ಹೊಂದಿರುವ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಚಿಕಿತ್ಸೆಯನ್ನು ಆಯಾ ಹಂತಗಳಲ್ಲಿ ನೀಡಬೇಕು. ಅಗತ್ಯವಿದ್ದಲ್ಲಿ ರಕ್ತ ಪೂರಣ ಮತ್ತು ಐರನ್ ಸುಕ್ರೋಸ್ ಚುಚ್ಚುಮದ್ದು ನೀಡಬೇಕು ಎಂದು ಸಲಹೆ ನೀಡಿದರು. ಇದೇ ಡಿ.27ರಿಂದ ಮುಂದಿನ ಜ.11 ರವರೆಗೆ ನಡೆಯುವ ಕುಷ್ಟರೋಗ ಪತ್ತೆ ಆಂದೋಲನದಡಿ ರಚಿಸಿರುವ ತಂಡಗಳ ಮೂಲಕ ನಿಖರವಾಗಿ ಶಂಕಿತರನ್ನು ಗುರುತಿಸಬೇಕು. ರೋಗ ಖಚಿತಪಟ್ಟಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡುವ ಮೂಲಕ ಪ್ರಕರಣಗಳ ಸಂಖ್ಯೆಯನ್ನು ಗಣನೀಯವಾಗಿ ನಿಯಂತ್ರಿಸಬೇಕು ಎಂದು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಅವರು ನಿರ್ದೇಶನ ನೀಡಿದರು.
ಕುಟುಂಬ ಕಲ್ಯಾಣ ತಾತ್ಕಾಲಿಕ ವಿಧಾನಗಳಲ್ಲಿ ಪುರುಷರಿಗಾಗಿರುವ ನೋ ಸ್ಕಾಲ್‍ಪೇಲ್ ವ್ಯಾಸೆಕ್ಟುಮಿಯನ್ನು ಹೆಚ್ಚು ಜಾಗೃತಿ ನೀಡುವ ಮೂಲಕ ಪುರುಷರು ಭಾಗವಹಿಸುವಿಕೆಯೊಂದಿಗೆ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಲು ತಿಳಿಸಿದರು. ಸೊಳ್ಳೆಯಿಂದ ಹರಡುವ ಕಾಯಿಲೆಗಳ ನಿಯಂತ್ರಣಕ್ಕಾಗಿ ಅಂತರ ಇಲಾಖೆಗಳೊಂದಿಗೆ ಸಭೆ ಆಯೋಜಿಸಿ ರೋಗ ನಿಯಂತ್ರಣಕ್ಕೆ ಇನ್ನೂ ಹೆಚ್ಚಿನ ಕ್ರಮವಹಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶ್‍ಬಾಬು, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ಆರ್.ಅನಿಲ್ ಕುಮಾರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ, ಜಿಲ್ಲಾ ಕುಟುಂಬ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಡಾ.ಪೂರ್ಣಿಮ ಕಟ್ಟಿಮನಿ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ.ವಿ., ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಈರಣ್ಣ, ಡಾ.ಭರತ್, ಡಾ.ಅರುಣ್ ಸೇರಿದಂತೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಡಿಎನ್‍ಓ ಗಿರೀಶ್, ಎನ್‍ಸಿಡಿ ಕನ್ಸಲ್ಟೆಂಟ್ ಡಾ.ಜಮೀನಾ ತಾಜ್, ಡಿಪಿಎಂ ವೆಂಕೋಬ್ ನಾಯ್ಕ್, ಆರ್‍ಕೆಎಸ್‍ಕೆ ಜಿಲ್ಲಾ ಸಮಾಲೋಚಕ ಮನೋಹರ್, ಡಿಪಿಸಿ ಅರ್ಚನಾ, ಸಿಪಿಎಂ ಸುರೇಶ್ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು