ಬಳ್ಳಾರಿ: ಸಮುದಾಯಗಳಲ್ಲಿ ಬಾಲ್ಯ ವಿವಾಹ ಮತ್ತು ದೇವದಾಸಿ ಪದ್ಧತಿ ತಡೆಗಟ್ಟುವಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು ಮತ್ತು ವಿವಿಧ ಇಲಾಖೆಗಳ ಸಹಕಾರ ಅಗತ್ಯ ಇದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಹೇಳಿದರು. ರೀಡ್ಸ್ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸಿಎಸಿಎಲ್ ಕರ್ನಾಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಬಿಡಿಎ ಫುಟ್‍ಬಾಲ್ ಮೈದಾನ ವೇದಿಕೆ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ್ಯವಿವಾಹ ಮತ್ತು ದೇವದಾಸಿ ಪದ್ಧತಿಯ ತಡೆಗಟ್ಟುವಲ್ಲಿನ ಸವಾಲುಗಳು ಮತ್ತು ಪರಿಹಾರ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಶಕ್ತ ಭಾರತ ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು 2030ರ ವೇಳೆಗೆ ಬಾಲ್ಯ ವಿವಾಹ ಮುಕ್ತ ಮಾಡಲು ಪಣ ತೊಟ್ಟಿದೆ. ಅದೇರೀತಿಯಾಗಿ ಸಮುದಾಯ, ಸಂಘಟನೆಗಳು, ಪೆÇೀಷಕರು, ಎಲ್ಲಾ ಸರ್ಕಾರಿ ಇಲಾಖೆಗಳ ಜೊತೆಗೂಡಿ ರಾಜ್ಯವನ್ನು ಬಾಲ್ಯ ವಿವಾಹ ಮುಕ್ತ ಮಾಡಲು ಸಮನ್ವಯ ಸಾಧಿಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತಿಚೀನ ದಿನಗಳಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗುತ್ತಿದ್ದು, ಇದರ ವಿರುದ್ಧ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಮಕ್ಕಳ ಕಾವಲು ಸಮಿತಿಗಳನ್ನು ರಚಿಸಿ ಅನುಷ್ಠಾನ ಮಾಡಬೇಕು. ವಿವಿಧ ಇಲಾಖೆಯಿಂದ ನೇಮಿಸಿದ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಸಮನ್ವಯ ಸಾಧಿಸಿ ಬಾಲ್ಯವಿವಾಹಗಳನ್ನು ತಡೆಗಟ್ಟುವಲ್ಲಿ ಶ್ರಮವಹಿಸಬೇಕು ಎಂದು ತಿಳಿಸಿದರು. ಆಡುತ್ತ ತಮ್ಮ ಬಾಲ್ಯವನ್ನು ಅನುಭವಿಸಬೇಕಿದ್ದ ಮಕ್ಕಳು ಬಾಲ್ಯ ವಿವಾಹವೆಂಬ ಸುಳಿಗೆ ಸಿಲುಕುತ್ತಿದ್ದಾರೆ. ಬಾಲ್ಯ ವಿವಾಹದಿಂದ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬಾರದಂತೆ ತಡೆಯಬೇಕು, ಪೆÇೀಷಕರಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆಯ ಬಗ್ಗೆ ಅರಿವು ಮೂಡಿಸಿ ಬಾಲ್ಯ ವಿವಾಹವನ್ನು ತೊಲಗಿಸಬೇಕು ಎಂದು ಸರ್ಕಾರೇತರ ಸಂಘ ಸಂಸ್ಥೆಗಳ ಸ್ವಯಂ ಸೇವಕರಿಗೆ ಕಿವಿಮಾತು ಹೇಳಿದರು.
ರಾಜ್ಯದಲ್ಲಿ 28,657 ಪ್ರಕರಣಗಳು ಬಾಲ್ಯವಿವಾಹವಾದ ಗರ್ಭಿಣಿಯರಿದ್ದಾರೆ. ಅದೇ ರೀತಿಯಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 62 ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ರೀಡ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಸಿದ್ದರಾಮಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯ ವಿವಾಹ ಮತ್ತು ದೇವದಾಸಿ ಪದ್ಧತಿಗಳಿಗೆ ಮೂಲ ಕಾರಣ ಬಡತನ. ಸರ್ಕಾರವು ಬಡತನ ನಿರ್ಮೂಲನೆಗಾಗಿ ಸಾಕಷ್ಟು ಶ್ರಮಿಸುತ್ತಿದೆ. ಮನುಷ್ಯ ಬುದ್ಧಿ ಜೀವಿಯಾಗಿದ್ದು, ಜ್ಞಾನ ಮತ್ತು ವಿಚಾರಧಾರೆಗಳನ್ನು ಅಳವಡಿಸಿಕೊಳ್ಳಬೇಕು; ಅಂದಾಗ ಮಾತ್ರ ಮೂಢನಂಬಿಕೆ ತೊಲಗಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ವಿವಿಧ ವಿಚಾರಗಳನ್ನು ಅಭಿವೃದ್ಧಿ ಸೂಚಕಗಳಾಗಿ ಇಟ್ಟುಕೊಂಡು, ಚಿಕ್ಕ ಚಿಕ್ಕ ಜನಸಮುದಾಯಗಳ ವಾರ್ಡ್ ಮಟ್ಟ ಮಕ್ಕಳಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಕಂಡುಕೊಂಡು, ಅವುಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಇದರಿಂದ ಗ್ರಾಮ ಪಂಚಾಯಿತಿಗಳು ‘ಮಕ್ಕಳ ಸ್ನೇಹಿ’ ಆಗುತ್ತವೆ ಎಂದು ಅಭಿಮತ ವ್ಯಕ್ತ ಪಡಿಸಿದರು. ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳ ಹಕ್ಕುಗಳನ್ನು ಉತ್ತೇಜಿಸುವುದು ಮತ್ತು ರಕ್ಷಿಸುವುದು, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ದೇವದಾಸಿ ಪದ್ಧತಿ ಹಾಗೂ ಲಿಂಗತಾರತಮ್ಯ ನಿರ್ಮೂಲನೆ ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಗಾರ ಹಮ್ಮಿಕೊಂಡಿದ್ದು, ಇದರ ಉದ್ದೇಶಗಳನ್ನು ಸ್ವಯಂ ಸೇವಾ ಸಂಸ್ಥೆಗಳು ಅರಿತುಕೊಳ್ಳಬೇಕು ಎಂದು ವಿವರಿಸಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಹೆಚ್.ಸಿ.ರಾಘವೇಂದ್ರ, ವಿಜಯನಗರ ಜಿಲ್ಲೆಯ ಸಖಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮೀ, ರೀಡ್ಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಸಿ.ತಿಪ್ಪೇಶಪ್ಪ, ಮೈಸೂರು ಆರ್‍ಎಲ್‍ಹೆಚ್‍ಪಿ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಸಿಎಸಿಎಲ್‍ಕೆ ಸಂಚಾಲಕಿ ಸರಸ್ವತಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತು ಜಾಗೃತಿ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಡಿವೈಎಸ್ಪಿ ಚಂದ್ರಕಾಂತ ನಂದಾರೆಡ್ಡಿ, ಉಚ್ಛ ನ್ಯಾಯಾಲಯದ ಅಡಿಷನಲ್ ಅಡ್ವೋಕೇಟ್ ಜನರಲ್ ಕೇಶವ ರೆಡ್ಡಿ, ಸಿಡಬ್ಲ್ಯೂಸಿ ಅಧ್ಯಕ್ಷೆ ವಿಜಯಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಮಕೃಷ್ಣ ನಾಯಕ್.ಎಂ., ಗಾಂಧಿನಗರ ಪೆÇಲೀಸ್‍ಠಾಣೆ ಇನ್ಸ್‍ಪೆಕ್ಟರ್ ಸಿದ್ಧರಾಮೇಶ್ವರ, ರೀಡ್ಸ್ ಸಂಸ್ಥೆಯ ಯೋಜನಾ ವ್ಯವಸ್ಥಾಪಕಿ ಕೆ.ಸೀತಾ ಮಹಾಲಕ್ಷ್ಮಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ವಿವಿಧ ಎನ್‍ಜಿಒ ಸಂಘ ಸಂಸ್ಥೆಗಳ ನಿರ್ದೇಶಕರು, ಸ್ವಯಂ ಸೇವಕರು ಹಾಗೂ ರೀಡ್ಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು, ಮತ್ತಿತರರು ಉಪಸ್ಥಿತರಿದ್ದರು.