ತಾಲ್ಲೋಕು ಆರೋಗ್ಯಾಧಿಕಾರಿ ಡಾ.ನಟರಾಜ್ ನೇತೃತ್ವದ ತಂಡದಿಂದ ದಿಢೀರ್ ಕಾರ್ಯಾಚರಣೆ
ಕೆ.ಆರ್.ನಗರ : ಕೆ.ಆರ್.ನಗರ ತಾಲ್ಲೋಕು ಆರೋಗ್ಯಾಧಿಕಾರಿ ಡಾ. ನಟರಾಜ್ ನೇತೃತ್ವದ ತಂಡ ದಿಢೀರ್ ಕಾರ್ಯಚರಣೆ ನಡೆಸಿ ಎರಡು ಕ್ಲಿನಿಕ್ ಗಳನ್ನು ಮುಚ್ಚಿಸಿದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ಹೆಬ್ಬಾಳು ಗ್ರಾಮದ ಜಯಲಕ್ಷ್ಮಿ ಮತ್ತು ದೊಡ್ಡೆಕೊಪ್ಪಲು ಗ್ರಾಮದ ರಾಮಕೃಷ್ಣ ಕ್ಲಿನಿಕ್ ಗಳ ಮೇಲೆ ದಾಳಿ ನಡೆಸಿ ಸೂಕ್ತ ದಾಖಲೆಗಳಿಲ್ಲದ ಕಾರಣ ಕ್ಲಿನಿಕ್ ಗಳನ್ನು ಮುಚ್ಚಿಸಲಾಯಿತು.
ಖಾಸಗಿ ಕ್ಲಿನಿಕ್ ನಡೆಸಲು ಜಿಲ್ಲಾ ಆರೋಗ್ಯಧಿಕಾರಿ ಕಚೇರಿಯಿಂದ ಕೆ.ಪಿ.ಎಂ.ಇ.ಪರವಾನಿಗೆ ಪಡೆದಿರುವ ದಾಖಲೆ, ವೈದ್ಯರು ತಾವು ಪಡೆದ ವೈದ್ಯ ಪ್ರಮಾಣ ಪತ್ರ ಪ್ರದರ್ಶನ ಮಾಡದೇ ಇರುವುದು ಜೊತೆಗೆ ಚಿಕಿತ್ಸೆಗೆ ದರ ಪಟ್ಟಿ ಹಾಕದೇ ಇರವುದರ ಬಗ್ಗೆ ನೋಟಿಸ್ ನೀಡಿ ಮುಚ್ವಿಸಿ ಸೂಕ್ತ ದಾಖಲೆಗಳನ್ನು ಒದಗಿಸಿದ ನಂತರ ಈ ಕ್ಲಿನಿಕ್ ಗಳನ್ನು ತೆರೆಯಲು ಸೂಚಿಸಲಾಯಿತು.
ಕೆ.ಆರ್.ನಗರ ತಾಲ್ಲೂಕಿನಲ್ಲಿ 6 ನರ್ಸಿಂಗ್ ಹೋಂಗ್ ಗಳು, 8 ದಂತಚಿಕಿತ್ಸಾ ಕ್ಲಿನಿಕ್ ಗಳು, 7 ಪಾಲಿಕ್ಲಿನಿಕ್ ಗಳು, 17 ಪ್ರಯೋಗಾಲಯಗಳು, 45 ಖಾಸಗಿ ಚಿಕಿತ್ಸಾಲಯಗಳು, 6 ಎಕ್ಸ್‌ರೇ ಕೇಂದ್ರಗಳು, 2 ಫಿಸಿಯೋಥೆರಪಿ ಕೇಂದ್ರಗಳು, 1 ಡಯಾಲಿಸಿಸ್ ಕೇಂದ್ರ, ಎರಡು ಕಣ್ಣಿನ ಆಸ್ಪತ್ರೆ, 1 ಸಿ.ಟಿ.ಸ್ಕ್ಯಾನ್, 7 ಸ್ಕ್ಯಾನಿಂಗ್ ಸೆಂಟರ್ ಗಳಿದ್ದು ತಮ್ಮ ತಮ್ಮ ಚಿಕಿತ್ಸಾ ಪದ್ಧತಿಯಲ್ಲಿ ಸೂಕ್ತ ದಾಖಲೆಗಳೊಂದಿಗೆ ಕಾರ್ಯ ನಿರ್ವಹಿಸ ತಕ್ಕದ್ದ ಸೂಕ್ತ ದಾಖಲೆಗಳು ಇಲ್ಲದಿದ್ದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಡಾ.ನಟರಾಜು ಎಚ್ಚರಿಕೆ ನೀಡಿದರು.
ತಮ್ಮಲ್ಲಿ ಬರುವ ಎಲ್ಲಾ ರೋಗಿಗಳ ಬಗ್ಗೆ ರಿಜಿಸ್ಟ್ರಾರ್ ನಲ್ಲಿ ದಾಖಲು ಮಾಡಿಕೊಳ್ಳಬೇಕಾಗುತ್ತದೆ.
ಅಧಿಕಾರಿಗಳು ತಪಾಸಣೆ ಮತ್ತು ವಿಚಾರಣೆಗೆ ಬಂದಾಗ ಈ ದಾಖಲೆಗಳು ಅತ್ಯವಶ್ಯ. ಇಲ್ಲದಿದ್ದರೆ ಕ್ಲಿನಿಕ್ ಮುಚ್ಚಬೇಕಾಗುತ್ತದೆ ಎಂದು ಹೇಳಿದರು. ಈಗಾಗಲೆ ಭೇರ್ಯ, ಸಾಲಿಗ್ರಾಮ, ಹೆಬ್ಬಾಳು,ಹಂಪಾಪುರ, ದೊಡ್ಡೆ ಕೊಪ್ಪಲಿನ ಖಾಸಗಿ ಕ್ಲಿನಿಕ್ ಗಳು ಮತ್ತು ಕೆ.ಆರ್.ನಗರದ ಸ್ಕ್ಯಾನಿಂಗ್ ಸೆಂಟರ್ ಗಳ ತಪಾಸಣೆ ನಡೆಸಿದ್ದು ಅವರಿಗೆ ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಕೆ.ವಿ.ರಮೇಶ್, ಮಹೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.
