ಮಂಡ್ಯ: ಸ್ಕ್ಯಾನಿಂಗ್ ಸೆಂಟರ್‌ಗಳು ಗರ್ಭಿಣಿ ಮಹಿಳೆಯರ ಸ್ಕ್ಯಾನಿಂಗ್ ನಡೆಸಿದಾಗ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಯಂತೆ ನಿಗದಿತ ನಮೂನೆಯಲ್ಲಿ ದಾಖಲಿಸಿ, ದಾಖಲೆಗಳನ್ನು ಕನಿಷ್ಟ ಎರಡು ವರ್ಷ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ತಿಳಿಸಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಮಂಡ್ಯದ ಮಿಮ್ಸ್ ನಲ್ಲಿ ಆಯೋಜಿಸಿದ್ದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಂತ್ರ (ದುರ್ಬಳಕೆ ಮತ್ತು ತಡೆ) ಕಾಯಿದೆ ೧೯೯೪ರ ಕಾಯಿದೆ ಬಗ್ಗೆ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸ್ಕ್ಯಾನಿಂಗ್ ಸೆಂಟರ್ ನಡೆಸಲು ಸರ್ಕಾರದಿಂದ ನಿಗದಿಪಡಿಸಿರುವ ಎಲ್ಲಾ ನಿಯಮಗಳನ್ನು ಪಾಲಿಸಬೇಕು. ಎಂಪ್ಯಾನಲ್ ಮಾಡಿಕೊಂಡಿರುವ ವೈದ್ಯರು ಮಾತ್ರ ಸ್ಕ್ಯಾನಿಂಗ್ ಕೆಲಸ ನಿರ್ವಹಿಸಬೇಕು ಎಂದರು. ಪಿ.ಸಿ.ಪಿ.ಡಿ.ಎನ್ ಟಿ ಕಾಯ್ದೆಯಡಿ ರಚಿಸಲಾಗಿರುವ ಸಮಿತಿಯು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಪ್ರತಿ ೩ ತಿಂಗಳಿಗೊಮ್ಮೆ ಅಥವಾ ಧಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಸ್ಕ್ಯಾನಿಂಗ್ ಸೆಂಟರ್ ಅವರು ಗರ್ಭಿಣಿಯರ ವಿವರವನ್ನು ಬಾಲಿಕಾ ಸಾಪ್ಟ್ ವೇರ್ ನಲ್ಲಿ ಅಪ್‌ಲೋಡ್ ಮಾಡಿ ನಿಗದಿಪಡಿಸಿರುವ ದಾಖಲೆ ಹಾಜರುಪಡಿಸಬೇಕು ಇಲ್ಲವಾದಲ್ಲಿ ಕಾಯ್ದೆ ಪ್ರಕಾರ ಪರವಾನಗಿ ರದ್ದು ಮಾಡಿ, ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅನಕ್ಷರಸ್ಥರು ಹಾಗೂ ಮೂಢ ನಂಬಿಕೆಯಿಂದ ಬಹಳಷ್ಟು ಜನರು ಭ್ರೂಣ ಹತ್ಯೆಯಂತಹ ಸಮಾಜ ಘಾತುಕ ಕೆಲಸಕ್ಕೆ ಕೈ ಹಾಕುತ್ತಾರೆ. ಆದರೆ ಸ್ಕ್ಯಾನಿಂಗ್ ಹಾಗೂ ಭ್ರೂಣ ಹತ್ಯೆ ಮಾಡುವವರು ವಿದ್ಯಾವಂತರು. ಇದರ ಪರಿಣಾಮ ಹಾಗೂ ಶಿಕ್ಷೆ ಅವರಿಗೆ ಕಟ್ಟಿಟ್ಟ ಬುತ್ತಿ ಎಂದರು. ಹೆಣ್ಣನ್ನು ದೇವತೆ ಎಂದು ಪೂಜಿಸುವ ಸಮಾಜ ಭ್ರೂಣದಲ್ಲೇ ಹೆಣ್ಣನ್ನು ಕೊಂದರೆ. ಮಾನವೀಯ ಮೌಲ್ಯಗಳು ಸಮಾಜದಲ್ಲಿ ಉಳಿಯಲು ಸಾಧ್ಯವಿಲ್ಲ. ಗಂಡು ಮತ್ತು ಹೆಣ್ಣು ಸಮಾಜದ ಎರಡು ಮುಖಗಳಿದ್ದ ಆಗೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಇತ್ತೀಚಿನ ದಿನಗಳಲ್ಲಿ ಹೆಣ್ಣು ಭ್ರೂಣ ಹತ್ಯೆ ಹೆಚ್ಚುತ್ತಿರುವುದರಿಂದ ಅದನ್ನು ತಡೆಗಟ್ಟಲು ಈಗಾಗಲೇ ಜಿಲ್ಲೆಯಲ್ಲಿ ತಂಡ ರಚನೆಯಾಗಿದೆ, ಇಂತಹ ಅಮಾನುಷ ಕೃತ್ಯಗಳು ಎಸಗುವುದು ಕಂಡು ಬಂದರೆ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖ್ ತನ್ವಿರ್ ಆಸೀಫ್ ಅವರು ಮಾತನಾಡಿ ಹೆಣ್ಣು ಭ್ರೂಣ ಹತ್ಯೆ, ಬಾಲ್ಯವಿವಾಹ ಮತ್ತು ವರದಕ್ಷಿಣೆ ಎಂಬ ಅನಿಷ್ಟ ಪದ್ಧತಿಗಳು ಹೆಚ್ಚಾಗಿ ಕಂಡುಬರುತ್ತಿವೆ ಅದನ್ನು ಎಲ್ಲರೂ ಒಗ್ಗಟ್ಟಾಗಿ ಸೇರಿ ನಿರ್ಮೂಲನೆ ಮಾಡಬೇಕು ಇದಕ್ಕೆ ಎಲ್ಲಾರ ಸಹಕಾರ ಮುಖ್ಯ ಎಂದರು. ಇದೇ ಸಂದರ್ಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ವಸುಂಧರ ಭೂಪತಿ, ರಾಜ್ಯ ತಪಾಸಣಾ ಮತ್ತು ಮೇಲ್ವಿಚಾರಣೆ ಸಮಿತಿಯ ಸದಸ್ಯರಾದ ವಸಂತ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕೆ ಮೋಹನ್, ಮಿಮ್ಸ್ ಅಧೀಕ್ಷಕರಾದ ಡಾ. ಶ್ರೀಧರ್, ಜಿಲ್ಲಾ ಕುಷ್ಟ ರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.