ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ಹಿನ್ನಲೆ ಜಿಲ್ಲೆಯಲ್ಲಿರುವ ಕಲ್ಯಾಣ ಮಂಟಪ, ದೇವಸ್ಥಾನ, ದೇವಸ್ಥಾನದ ಭವನ/ಸಮುದಾಯಭವನ, ಮಸೀದಿ ಹಾಗೂ ಚರ್ಚುಗಳ ಮಾಲೀಕರು ಮತ್ತು ವ್ಯವಸ್ಥಾಪಕರು ತಮ್ಮ ಕಲ್ಯಾಣ ಮಂಟಪದಲ್ಲಿ ಮದುವೆಗಾಗಿ ಕಾಯ್ದಿರಿಸುವಾಗ ಬಾಲ್ಯವಿವಾಹ ತಡೆಯಲು ವಧು-ವರರ ವಯಸ್ಸಿನ ದೃಢೀಕರಣವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ಆದೇಶಿಸಿದ್ದಾರೆ.
ಲಗ್ನಪತ್ರಿಕೆ ಮುದ್ರಿಸುವ ಪ್ರಿಂಟಿಂಗ್ ಪ್ರೆಸ್ ಮಾಲೀಕರು ವಧು-ವರರ ವಯಸ್ಸಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಪಡೆದು ಹೆಣ್ಣು ಮಕ್ಕಳಿಗೆ ೧೮ ವರ್ಷ ಮತ್ತು ಗಂಡು ಮಕ್ಕಳಿಗೆ ೨೧ ವರ್ಷ ಪೂರ್ಣಗೊಂಡಿರುವ ದಾಖಲಾತಿಗಳನ್ನು ಪಡೆದು ಪರಿಶೀಲಿಸಿ, ವಯಸ್ಸಿನ ಬಗ್ಗೆ ದೃಢೀಕರಿಸಿಕೊಂಡು ನಂತರವೇ ಲಗ್ನಪತ್ರಿಕೆ ಮುದ್ರಿಕೆ ಹಾಗೂ ಕಲ್ಯಾಣ ಮಂಟಪವನ್ನು ಕಾಯ್ದಿರಿಸಿಬೇಕು. ಜೊತೆಗೆ ವಧು-ವರರು ತಾವು ಸ್ವ-ಇಚ್ಚೆಯಿಂದ ವಿವಾಹವಾಗುತ್ತಿರುವ ಬಗ್ಗೆ ಮತ್ತು ಯಾವುದೇ ರೀತಿಯ ವರದಕ್ಷಿಣೆ ನೀಡದಿರುವ ಅಥವಾ ತೆಗೆದುಕೊಳ್ಳದಿರುವ ಬಗ್ಗೆ ಪ್ರಮಾಣ ಪತ್ರವನ್ನು ಸಹ ಪಡೆಯಬೇಕು ಎಂದು ಸೂಚಿಸಿದ್ದಾರೆ.
ವಯಸ್ಸಿನ ದೃಢಿಕರಣಕ್ಕೆ ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ ವರ್ಗಾವಣಾ ಪತ್ರ (ಟಿ.ಸಿ) ವನ್ನು ಮಾತ್ರ ಪರಿಗಣಿಸಿಬೇಕು. ಇಲ್ಲದೇ ಕಾನೂನು ಉಲ್ಲಂಘನೆ ಮಾಡಿದಲ್ಲಿ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಮತ್ತು ಕಲ್ಯಾಣ ಮಂಟಪಗಳ ಪರವಾನಗಿ ರದ್ದುಗೊಳಿಸಲು ಕ್ರಮವಹಿಸಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.