ಚಿತ್ರದುರ್ಗ: ಜಿಲ್ಲಾಡಳಿತದ ವತಿಯಿಂದ 2024ರ ಜನವರಿ 01 ರಂದು ಜಿಲ್ಲಾ ಕೇಂದ್ರದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಅದ್ಧೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಆಚರಿಸುವ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಜ.1 ರಂದು ಬೆಳಿಗ್ಗೆ 11 ಕ್ಕೆ ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸರ್ಕಾರದ ಶಿಷ್ಟಾಚಾರ ಅನುಸಾರ ಆಹ್ವಾನ ಪತ್ರಿಕೆ ಮುದ್ರಿಸಿ, ಜನಪ್ರತಿಧಿನಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ಉಮೇಶ ಪತ್ತಾರ ಮತ್ತು ತಂಡದವರಿಂದ ಗೀತಗಾಯನ ಪ್ರಸ್ತುತಪಡಿಸುವರು. ಸಮಾರಂಭದಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದರು.
ಅಮರಶಿಲ್ಪಿ ಜಕಣಾಚಾರಿ ಅವರು ನಾಡಿನ ಐತಿಹಾಸಿಕ ವಾಸ್ತುಶಿಲ್ಪ ಪರಂಪರೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಸಂಸ್ಮರಣಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಸಮಾಜದವರು ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು. ಜಿಲ್ಲಾ ವಿಶ್ವಕರ್ಮ ಸಮಾಜದ ವತಿಯಿಂದ ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಸಮಾಜದ ಒಬ್ಬರಿಗೆ ಜಕಣಾಚಾರಿ ಪ್ರಶಸ್ತಿ ನೀಡಲಾಗುವುದು. ಜಿಲ್ಲಾಡಳಿತದ ವತಿಯಿಂದ ಸಾಧಕರನ್ನು ಸನ್ಮಾನಿಸಲು ಅವಕಾಶ ಕಲ್ಪಿಸಬೇಕು ಎಂದು ಸಮಾಜದ ಮುಖಂಡರು ಕೋರಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ, ಜಿಲ್ಲಾ ವಿಶ್ವಕರ್ಮ ಸಮಾಜದ ಕೆ.ಟಿ. ಸುರೇಶಾಚಾರ್, ಕೃಷ್ಣಚಾರ್, ಸಿ.ಆರ್.ಸುರೇಶ್, ಎ.ಶಂಕರಾಚಾರ್, ಗೋವರ್ಧನಾಚಾರ್, ಮಲ್ಲಿಕಾರ್ಜುನ ಆಚಾರ್, ಎಂ.ಶಂಕರಮೂರ್ತಿ, ಬಾಲಬ್ರಹ್ಮಚಾರ್, ಸುನಿಲ್ ಕುಮಾರ್, ಸಿದ್ದೇಶ್, ಆರ್.ಡಿ.ಸಂಜಯ್, ಪಿ.ಎನ್.ಮುರುಳಿಧರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು. ಫೋಟೋ ವಿವರ: ಚಿತ್ರದುರ್ಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಉಪವಿಭಾಗಾಧಿಕಾರಿ ಎಂ.ಕಾರ್ತೀಕ್ ಅಧ್ಯಕ್ಷತೆಯಲ್ಲಿ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಪೂರ್ವಭಾವಿ ಸಭೆ ನಡೆಯಿತು.
