ಮೈಸೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯಾರೇ ಕಾಂಗ್ರೆಸ್ ಅಭ್ಯರ್ಥಿಯಾದರು ಸಂಘಟನಾತ್ಮಕವಾಗಿ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸೋಣ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.
ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿರುವ ತಮ್ಮ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಯಾರೇ ಅಭ್ಯರ್ಥಿಯಾದರೂ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಆ ಮೂಲಕ ಕೋಮುವಾದಿ ಬಿಜೆಪಿಯನ್ನು ಹಾಗೂ ಬಿಜೆಪಿ ಸಂಸದರನ್ನು ಸೋಲಿಸಲು ಎಲ್ಲರೂ ಶ್ರಮಿಸೋಣ ಎಂದರು. ಅದೇ ರೀತಿಯಲ್ಲಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಕೂಡ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಸ್ವತಂತ್ರವಾಗಿ ಪಾಲಿಕೆ ಅಧಿಕಾರ ಹಿಡಿಯಬೇಕಿದೆ. ಇದಕ್ಕಾಗಿ ಪಕ್ಷದ ಎಲ್ಲರೂ ಸಹ ಒಗ್ಗೂಡಿ ಕೆಲಸ ಮಾಡೋಣ ಎಂದರು.
ಅಲ್ಲದೇ ಡಿ.೨೨ರಂದು ಮಧ್ಯಾಹ್ನ ನಡೆಯುವ ಮೈಸೂರು ಕಿದ್ವಾಯಿ ಸ್ಮಾರಕ ಗಂಧಿ ಸಂಸ್ಥೆಯ ಫೆರಿಫೆರಲ್ ಕ್ಯಾನ್ಸರ್ ಕೇಂದ್ರ ಕಟ್ಟಡ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭ ಹಾಗೂ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗೆ ಸೇರಿದ ಬಾಲಕಿಯರ ವಿದ್ಯಾರ್ಥಿನಿಲಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಹೇಳಿದರು.