ಗುಂಡ್ಲುಪೇಟೆ: ತಾಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಸ್ತೆ ಡಾಂಬರೀಕರಣ ಉದ್ದೇಶದಿಂದ ನಿರ್ಬಂಧಿಸಲಾಗಿದ್ದ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳುವ ರಸ್ತೆ ತೀವ್ರ ಹದಗೆಟ್ಟು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿದ ಹಿನ್ನಲೆ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು ೧೧.೨೦ ಕಿ.ಮೀ ರಸ್ತೆಗೆ ಡಾಂಬರೀಕರಣ ಮಾಡಿ ದುರಸ್ತಿಪಡಿಸಲಾಗಿದೆ. ಈ ಕಾರಣದಿಂದ ಮೂರು ದಿನಗಳ ಕಾಲ ನಿರ್ಬಂಧಿಸಿದ ಬಸ್ ಸಂಚಾರ ಗುರುವಾರ ಬೆಳಗ್ಗೆಯಿಂದ ಎಂದಿನಂತೆ ಪ್ರಾರಂಭವಾಗಿದೆ.
ಕಳೆದ ಮೂರು ದಿನಗಳ ಬೆಟ್ಟಕ್ಕೆ ನಿರ್ಬಂಧ ಹೇರಿದ ಹಿನ್ನಲೆ ಪ್ರವೇಶ ಆರಂಭವಾದರು ಸಹ ಭಕ್ತಾದಿಗಳು ಹಾಗೂ ಪ್ರವಾಸಿಗರ ಸಂಖ್ಯೆ ಬಹಳ ಕಡಿಮೆಯಿತ್ತು. ಕೇವಲ ಮೂರು ಕೆಎಸ್‌ಆರ್‍ಟಿಸಿ ಬಸ್ ಗಳನ್ನು ಮಾತ್ರ ಗೋಪಾಲಸ್ವಾಮಿ ಬೆಟ್ಟಕ್ಕೆ ಬಿಡಲಾಗಿತ್ತು ಎಂದು ಡಿಪೋ ವ್ಯವಸ್ಥಾಪಕರಾದ ಪುಷ್ಪಾ ಮಾಹಿತಿ ನೀಡಿದರು. ಈ ಮಧ್ಯೆ ಅರಣ್ಯ ಇಲಾಖೆಯಿಂದಲೂ ಬೆಟ್ಟಕ್ಕೆ ಮೂರು ಜೀಪ್‌ಗಳು ಎಂದಿನಂತೆ ಸಂಚಾರ ಮಾಡಿವೆ.
ಗೋಪಾಲಸ್ವಾಮಿ ಬೆಟ್ಟದ ಹದಗೆಟ್ಟ ರಸ್ತೆ ದುರಸ್ತಿ ಪಡಿಸಲಾಗಿದ್ದು, ಬಸ್ ಸಂಚಾರ ಎಂದಿನಂತೆ ಗುರುವಾರದಿಂದ ಪ್ರಾರಂಭಗೊಂಡಿದೆ. ಭಕ್ತಾದಿಗಳು ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿ, ಪ್ರಕೃತಿ ಸೌಂದರ್ಯ ಸವಿಯುವ ಜೊತೆಗೆ ದೇವರ ದರ್ಶನ ಪಡೆಯಿರಿ.
-ಪುಷ್ಪಾ, ಡಿಪೋ ವ್ಯವಸ್ಥಾಪಕ. ಗುಂಡ್ಲುಪೇಟೆ.