ತುಮಕೂರು: ನ್ಯೂ ಇಯರ್ ಪಾರ್ಟಿಗಳಿಗೆ ಅವಕಾಶ ನೀಡದಂತೆ ಜಿಲ್ಲಾ ಭಜರಂಗದಳದಿಂದ ಜಿಲ್ಲಾಧಿಕಾರಿ, ಎಸ್ಪಿ, ತಹಶೀಲ್ದಾರ್ ಗೆ ಮನವಿ ಮಾಡಲಾಗಿದೆ.
ಹೊಸ ವರ್ಷದ ಹೆಸರಿನಲ್ಲಿ ಮದ್ಯದ ಪಾರ್ಟಿ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಜಿಲ್ಲಾ ಭಜರಂಗದಳ, ಹೊಸ ವರ್ಷದಂದು ಪಾಟಾಕಿ ಸಿಡಿಸಲು ಅನುಮತಿ ನೀಡಬಾರದು.ಅಂತೆಯೇ ಡಿ.31 ಹಾಗೂ ಜನವರಿ 1 ರಂದು ಹೊಸ ವರ್ಷದ ಹೆಸರಿನಲ್ಲಿ ಪಾರ್ಟಿ ಆಯೋಜನೆಗೆ ಅವಕಾಶ ಕೊಡಬಾರದು ಎಂದು ಕೋರಿದ್ದಾರೆ.
ಕೆಲ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆಗಳಿಂದ ದೇವರಾಯನದುರ್ಗ ಅರಣ್ಯ ಪ್ರದೇಶದ ಸಮೀಪ, ಸಿದ್ದರಬೆಟ್ಟ, ನಾಮದ ಚಿಲುಮೆ, ಬಸ್ದಿ ಬೆಟ್ಟ, ಚನ್ನರಾಯನದುರ್ಗ, ಮಧುಗಿರಿ ಏಕಶಿಲಾ ಬೆಟ್ಟ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳ ಸಮೀಪದಲ್ಲಿ ಹೋಟೆಲ್, ಹೋಂ ಸ್ಟೇಗಳಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿದೆ. ಇದು ಪಾಶ್ಚಿಮಾತ್ಯ ಸಂಸ್ಕೃತಿಗೆ ಸೇರಿದ ಆಚರಣೆ. ಈ ಆಚರಣೆಯನ್ನು ಬಜರಂಗದಳ ವಿರೋಧಿಸುತ್ತದೆ. ಹೀಗಾಗಿ ವರ್ಷ ಆಚರಣೆಯ ಹೆಸರಿನಲ್ಲಿ ಅಶ್ಲೀಲ ನೃತ್ಯ, ಮಾದಕ ದ್ರವ್ಯ ಪಾರ್ಟಿಗೆ ಅವಕಾಶ ಕೊಡದಂತೆ ಮನವಿ ಮಾಡಿದ್ದಾರೆ.