ಬಳ್ಳಾರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಾರ್ವಜನಿಕರೊಂದಿಗೆ ಅತ್ಯಂತ ಸ್ನೇಹಮಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಯ ಎಲ್ಲಾರಿಗೂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವೈ.ರಮೇಶಬಾಬುರವರು. ಇತ್ತೀಚಿಗೆ ಕುರುಗೋಡು ತಾಲ್ಲೂಕು ಯರಂಗಳಿಗಿ ಗ್ರಾಮದಲ್ಲಿ ನಡೆದ ಘಟನೆ ಹಾಗೂ ಅದಕ್ಕೆ ಇಲಾಖೆಯ ಸಿಬ್ಬಂದಿಗಳು ಸ್ಪಂದಿಸಿದ ರೀತಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಘಟನೆ ವಿವರ: ಗಂಡ ಮಾತು ಬಾರದ ಮೂಕ, ಮನೆಯಲ್ಲಿ ಆರೈಕೆ ಮಾಡಲು ಯಾರು ಇಲ್ಲ, ವಯಸ್ಸಾದ ಅಜ್ಜಿ ಹಾಸಿಗೆ ಮೇಲೆ. ಇದು ಯರಂಗಳಿಗಿ ಗ್ರಾಮದ ಮಮ್ತಾಜ್ ಗಂಡ ರಾಜಭಕ್ಷಿ ಅವರ ಜೀವನ ಕ್ರಮ. ಮದುವೆ ನಂತರ ಮೊದಲ ಹೆರಿಗೆಯಾದ ತಕ್ಷಣ ಮಗು ಮರಣ ಹೊಂದಿದ್ದು, ತದನಂತರ ಎರಡು ಬಾರಿಯೂ ಗರ್ಭಪಾತವಾಗಿದ್ದು, ಪ್ರಸ್ತುತ ನಾಲ್ಕನೇ ಬಾರಿ ಗರ್ಭಣಿಯಾದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯು ನಿರಂತರ ನಿಗಾವಹಿಸಲಾಗಿತ್ತು.
ಜ.4 ನೇ ತಾರೀಖಿನಂದು ನಿರೀಕ್ಷಿತ ಹೆರಿಗೆ ದಿನಾಂಕವಿತ್ತು. ಆದರೆ ಹೆರಿಗೆ ನೋವು ಡಿ.19 ರಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗ್ರಾಮದ ಆಶಾ ಕಾರ್ಯಕರ್ತೆ ಶೋಭಾ ಅವರು ತಕ್ಷಣ ಮಾಹಿತಿಯಿಂದ ಮನೆಗೆ ಭೇಟಿ ನೀಡಿ, ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರೇಷ್ಮಾ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಶರಣಮ್ಮ, ಮೃತ್ಯುಂಜಯ, ಶಂಕ್ರಮ್ಮ ಮನೆ ಭೇಟಿ ನೀಡಿ ಗರ್ಭಿಣಿಯ ಮನವೊಲಿಸಿ, ಹಣ ಹಾಗೂ ಬಟ್ಟೆಯ ವ್ಯವಸ್ಥೆ ಮಾಡಿಕೊಟ್ಟು, ವಿಮ್ಸ್‍ಗೆ ದಾಖಲಿಸಲಾಗಿತ್ತು.

ರಕ್ತದೊತ್ತಡ ಹೆಚ್ಚಿದ್ದು, ದೇಹದಲ್ಲಿ ರಕ್ತದ ಪ್ರಮಾಣ 8.6 ಇದ್ದುದರಿಂದ ಒಂದು ಬಾಟಲಿ ರಕ್ತವನ್ನು ಪೂರಣ ಮಾಡಿಸಿ, ಪ್ರಸೂತಿ ಡಾ.ಆಶಾ ರಾಣಿ ಅವರ ನೇತೃತ್ವದಲ್ಲಿ ಸಹಜ ಹೆರಿಗೆ ಮಾಡಲಾಗಿದ್ದು, ಈಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಆಶಾ ಕಾರ್ಯಕರ್ತೆ ಶೋಭಾ ರಾತ್ರಿಪೂರ್ತಿ ಜೊತೆಗೆ ಇದ್ದು ಆರೈಕೆ ಮಾಡಿ ಮಾನವಿಯತೆ ಮೆರೆದಿದ್ದಾರೆ. ಪ್ರಸ್ತುತ ತಾಯಿ ಮಗು ಆರೋಗ್ಯವಾಗಿದ್ದಾರೆ. ಬಾಣಂತಿ ಮುಮ್ತಾಜ್ ಮಾತನಾಡಿ, “ದೇವರಂತೆ ಆರೋಗ್ಯ ಇಲಾಖೆಯ ಎಲ್ಲರೂ ಸೇರಿ ನನಗೆ ಸಹಜ ಹೆರಿಗೆ ಮಾಡಿಸಿ ತೊಂದರೆಯಾಗದಂತೆ ಮಾಡಿದ್ದಾರೆ. ನನ್ನ ಮಗುವಿಗೆ ಅವರು ತಿಳಿಸುವ ಹೆಸರನ್ನು ಇಡುತ್ತೇನೆ” ಎಂದು ಕೃತಜ್ಞತೆ ಸಲ್ಲಿಸಿದರು.
ಈ ಕುರಿತು ಸಿಬ್ಬಂದಿಗಳನ್ನು ಅಭಿನಂದಿಸಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಇರುವ ಗರ್ಭಿಣಿಯರ ಪಟ್ಟಿ ಮಾಡಿ ನಿಗಾವಹಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸಹಾಯವಾಗಲು ಜಿಲ್ಲಾ ಮಟ್ಟದಲ್ಲಿ ವಾಟ್ಸ್‍ಆಪ್ ಗ್ರೂಪ್ ರಚಿಸಲಾಗಿದೆ. ಇದರಿಂದ ತಕ್ಷಣ ಹತ್ತಿರದ ಆಸ್ಪತ್ರೆಗೆ ಕಳುಹಿಸಲು ಸಹಾಯವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ತಾಯಿ-ಮಗುವಿನ ಜೀವ ಕಾಪಾಡುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ವಿಶೇಷವಾಗಿ ಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ತಂಡಕ್ಕೆ ಅಭಿನಂದನೆಗಳು ತಿಳಿಸಿದರು.
