ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕರಡು ಸಮಿತಿಯ ಸದಸ್ಯರ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೂ ಸ್ಥಾನ ನೀಡಲಾಗಿದೆ.
ಇದಕ್ಕಾಗಿ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಖರ್ಗೆ ಅವರಿಗೆ ಧನ್ಯವಾದ ಸಮರ್ಪಿಸಿ ಸಂದೇಶ ಪ್ರಕಟಿಸಿರುವ ಸಿದ್ದರಾಮಯ್ಯ, ಇದು ಕಾಂಗ್ರೆಸ್ ಸರ್ಕಾರದ ‘ಕರ್ನಾಟಕ ಮಾದರಿ’ಗೆ ಸಂದ ಗೌರವ ಎಂದು ಉಲ್ಲೇಖಿಸಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಕರಡು ಸಮಿತಿಯ ಸದಸ್ಯನನ್ನಾಗಿ ನೇಮಿಸಿದ್ದಕ್ಕಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಂದು ದೇಶಾದ್ಯಂತ ಜನರು ನಮ್ಮ ಸರ್ಕಾರದ ‘ಕರ್ನಾಟಕ ಮಾದರಿ’ ಆಡಳಿತವನ್ನು ಪಕ್ಷಾತೀತ ಮಾನದಂಡವೆಂದು ಗುರುತಿಸುತ್ತಾರೆ. ಪ್ರಣಾಳಿಕೆ ರಚನೆಯಲ್ಲಿ ಅವಕಾಶ ನೀಡಿರುವುದು ಎಐಸಿಸಿಯ ಈ ‘ಕರ್ನಾಟಕದ ಆಡಳಿತ ಮಾದರಿ’ಗೆ ಸಿಕ್ಕಿರುವ ಗೌರವ ಎಂದು ನಾನು ಭಾವಿಸುತ್ತೇನೆ. ಪಕ್ಷದ ಪ್ರಣಾಳಿಕೆಯು ಮತದಾರರಿಗೆ ನೀಡಿದ ಭರವಸೆಗಳ ಪಟ್ಟಿ ಮಾತ್ರವಲ್ಲ; ಇದು ನಾವು ಜನರಿಗೆ ಮಾಡುವ ಬದ್ಧತೆಯಾಗಿದೆ ಮತ್ತು ಅದನ್ನು ಅನುಷ್ಠಾನಗೊಳಿಸುವುದು ಆಡಳಿತದ ನಿಜವಾದ ಸಾರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಈ ಹಿಂದೆ ನಾವು ಅಧಿಕಾರದಲ್ಲಿದ್ದಾಗ ಸರಕಾರ ಪ್ರಣಾಳಿಕೆಯಲ್ಲಿನ ಶೇ 95ಕ್ಕೂ ಹೆಚ್ಚು ಭರವಸೆಗಳನ್ನು ಜಾರಿಗೊಳಿಸಿ, ಸಮಾನ ಅವಕಾಶ ಹಾಗೂ ಸಮತೋಲಿತ ಅಭಿವೃದ್ಧಿ ಕಲ್ಪಿಸಿ, ಆ ಮೂಲಕ ಜನರ ವಿಶ್ವಾಸ ಗಳಿಸಿತ್ತು. ಪ್ರಸ್ತುತ ಸರಕಾರವೂ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶದ ಜನತೆಯೂ ಕರ್ನಾಟಕ ಮಾದರಿ ಆಡಳಿತದ ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಎಲ್ಲಾ ಕಲ್ಯಾಣ ಮತ್ತು ಮೂಲಸೌಕರ್ಯ ಉಪಕ್ರಮಗಳಿಗೆ ಬೆಂಬಲ ನೀಡಿದ ಪಕ್ಷದ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದು ಎಕ್ಸ್ ಸಂದೇಶದಲ್ಲಿ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.