ಕೆ.ಆರ್.ನಗರ: ಸಾಲಿಗ್ರಾಮ ತಾಲೂಕಿನ ಇತಿಹಾಸ ಪ್ರಸಿದ್ದ ಧಾರ್ಮಿಕ ಯಾತ್ರಾ ಸ್ಥಳ ಶ್ರೀ ಕ್ಷೇತ್ರ ಚುಂಚನಕಟ್ಟೆ ಗ್ರಾಮದಲ್ಲಿನ ಶ್ರೀ ರಾಮ ದೇವಾಲಯದಲ್ಲಿ ಅದ್ಧೂರಿಯಾಗಿ ನಡೆದ ವೈಕುಂಠ ಏಕಾದಶಿಯ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿನ ಭಕ್ತರು ಭಾಗವಹಿಸಿ ಭಕ್ತಿ ಭಾವ ಮೆರೆದರು.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಸುಪ್ರಭಾತ, ಹಾಲು-ಮೊಸರು, ಅರ್ಚಕ ವೃಂದ ಅರಿಶಿನ-ಕುಂಕುಮ, ಎಳನೀರು, ಪಂಚಾಮೃತಾಭಿಷೇಕ ಸೇರಿದಂತೆ ಪವಿತ್ರ ಕಾವೇರಿ ನೀರಿನಿಂದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಮೂಲ ಮೂರ್ತಿಗಳಿಗೆ ಜಲಾಭಿಷೇಕ ಮಾಡಲಾಯಿತು.
ನಂತರ ಹಲವು ಬಗೆಯ ಪುಷ್ಪಗಳ ತೋ ಮಾಲಾ ಅಲಂಕರಿಸಿ, ವಿವಿಧ ಧಾರ್ಮಿಕ ಕಾರ್ಯಗಳನ್ನು ನಡೆಸಲಾಯಿತು. ಅಲ್ಲದೇ ಇನ್ನು ಶೃಂಗಾರಗೊಂಡಿದ್ದ ಶ್ರೀರಾಮ, ಲಕ್ಷ್ಮಣ ಹಾಗೂ ಸೀತಮ್ಮನ ಉತ್ಸವ ಮೂರ್ತಿಗಳನ್ನು ಮುಂಜಾನೆ ಪಲ್ಲಕ್ಕಿ ಮೂಲಕ ಭಕ್ತ ಸಮೂಹ ಗೋವಿಂದಾ ಗೋಪಾಲ ಎಂಬ ಮಂತ್ರ ಪಠಣದೊಂದಿಗೆ ದೇಗುಲದ ಸುತ್ತ ಪ್ರದಕ್ಷಿಣೆ ಮಾಡಿಸಿ, 5.15ಕ್ಕೆ ದೇವರನ್ನು ಉತ್ತರ ದಿಕ್ಕಿನ ವೈಕುಂಠ ದ್ವಾರದಲ್ಲಿ ಕರೆದಂದು ಪ್ರತಿಷ್ಠಾಪಿಸಿ ಪೂಜಾಗಳನ್ನು ನೆರವೇರಿಸಲಾಯಿತು.

ವೈಕುಂಠ ಸ್ವರ್ಗದ್ವಾರಕ್ಕೆ ಪ್ರವೇಶ : ಬಳಿಕ ಭಕ್ತರ ಸಮ್ಮುಖದಲ್ಲಿ ನೈವೇದ್ಯ ಮಂಗಳಾರತಿ ನೆರವೇರಿಸಿದ ಆರ್ಚಕರು ಬೆಳಗ್ಗೆ 6.30ರಲ್ಲಿ ಭಕ್ತರಿಗೆ ಸ್ವರ್ಗದ್ವಾರ ಪ್ರವೇಶಕ್ಕೆ ಚಾಲನೆ ನೀಡಿದರು.
ಗ್ರಾಮಸ್ಥರು ಸೇರಿದಂತೆ ಜಿಲ್ಲೆಯ ನಾನಾ ಭಾಗಗಳಿಂದ ಭಕ್ತರು ಸಂಜೆವರೆಗೂ ತಂಡೋಪತಂಡವಾಗಿ ದೇಗುಲಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ವರ್ಣರಂಜಿತ ಅಲಂಕಾರ : ಈ ಬಾರಿ ನಡೆದ ವೈಕುಂಠ ಏಕಾದಶಿಯ ವಿಶೇಷ ಧಾರ್ಮಿಕ ಕಾರ್ಯಕ್ರಮದ ಹಿನ್ನಲೆಯಲ್ಲಿ ದೇವಾಲಯವನ್ನು ಹೂಗಳು ವರ್ಣರಂಜಿತವಾಗಿ ಆಲಂಕಾರ ಮಾಡಿದ್ದು ಬಂದ ಭಕ್ತಾಧಿಗಳ ಮೆಚ್ಚುಗೆ ಪಾತ್ರವಾಯಿತು
ಪ್ರಸಾದ ವಿತರಣೆ:- ದೇಗುಲ ಆಡಳಿತ ಹಾಗೂ ಭಕ್ತರ ಸಹಯೋಗದಲ್ಲಿ ಬರುವ ಭಕ್ತರಿಗೆ ಅವಲಕ್ಕಿ ಹಾಗೂ ಸಿಹಿ ಪೊಂಗಲ್ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಮೇಗೌಡ ಹಾಗೂ ಪತ್ನಿ ವನಜಾಕ್ಷಿ, ಗ್ರಾಪಂ ಮಾಜಿ ಅಧ್ಯಕ್ಷೆರಾದ ಗೌರಮ್ಮ, ಪ್ರೇಮಕುಮಾರ್, ಮಾಜಿ ಸದಸ್ಯ ಸಿ.ಜಿ. ಮಧು, ದೇಗುಲದ ಇಒ ರಘು, ಪಾರುಪತ್ತೆದಾರ ಯತಿ, ಅರ್ಚಕರಾದ ವಾಸುದೇವನ್, ನಾರಾಯಣ ಅಯ್ಯಂಗಾರ್, ಇದ್ದರು.