ಮಂಡ್ಯ: ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ನಡೆಯುತ್ತಿರುವ ಕಳೆದ 110 ದಿನಗಳ ರೈತ ಹಿತರಕ್ಷಣಾ ಸಮಿತಿಯ ನಿರಂತರ ಹೋರಾಟ ಮುಂದುವರೆದಿದ್ದು, ಧರಣಿ ಉಪವಾಸ ಸತ್ಯಾಗ್ರಹ ಜೊತೆಗೆ 29ನೇ ದಿನಕ್ಕೆ ಕಾಲಿಟ್ಟಿದೆ.
ರೈತರ ಹೋರಾಟಕ್ಕೆ ಮಳವಳ್ಳಿಯ ಸೌಹಾರ್ದ ನಾಗರಿಕ ವೇದಿಕೆ ಬೆಂಬಲ ಸೂಚಿಸಿದೆ.
ಕಾವೇರಿ ಚಳವಳಿ ಸರ್ಕಾರ ಮತ್ತು ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುತ್ತಿದೆ. ಹೋರಾಟಗಾರರು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿ. ರೈತರ ಕಣ್ಣಿಗೆ ಬಟ್ಟೆ ಕಟ್ಟಿ ಕಿವಿಗೆ ಹೂವು ಮೂಡಿಸುವ ಕೆಲಸ ಮಾಡಬೇಡಿ. ಸಚಿವರು ಬೇಸಿಗೆ ಬೆಳೆಗೆ ನೀರು ಇಲ್ಲ, ಕುಡಿಯಲು ಮಾತ್ರ ಬಳಕೆ ಎಂದಿದ್ದಾರೆ. ಮುನ್ನೆಚ್ಚರಿಕೆ ವಹಿಸಿದ್ದರೆ ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದರು.
ತಮಿಳುನಾಡಿಗೆ ನೀರು ಬಿಟ್ಟಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ಯಾವ ಬಾಯಲ್ಲಿ ಹೇಳುತ್ತಾರೆ. ಬಿಳಿ ಗುಂಡ್ಲು ಅಳತೆ ಮಾಪನದಲ್ಲಿ ತೆಗೆಸಲಿ ಎಷ್ಟು ನೀರು ಹರಿದಿದೆ ಎಂಬ ವಾಸ್ತವ ಸತ್ಯ ಗೊತ್ತಾಗಲಿದೆ. ಹೋರಾಟಗಾರರಿಗೆ ಚಳವಳಿ ಆರಂಭಿಸುವುದು ಗೊತ್ತು, ನಿಲ್ಲಿಸುವುದು ಗೊತ್ತು. ಕಾವೇರಿ ವಿಚಾರದಲ್ಲಿ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿ ಎಂದು ಆಗ್ರಹಿಸಿದರು.