ಮೈಸೂರು: ಮಡುವಿನಹಳ್ಳಿ ಹಾಗೂ ಕಂದೇಗಾಲ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಎರಡು ವರ್ಷದ ಹೆಣ್ಣು ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. ಗ್ರಾಮಸ್ಥರ ಆತಂಕ ಈಗ ದೂರವಾಗಿದೆ. ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಜಮೀನಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿನಲ್ಲಿ ಚಿರತೆ ಸೆರೆಯಾಗಿದೆ.
ಸಹಾಯಕ ಅಧಿಕಾರಿ ಮಹಾಂತೇಶ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆಗೆ ಯೋಜನೆ ರೂಪಿಸಿದ್ದರು. ಚಿರತೆಯ ಚಲನವಲನ ಗಮನಿಸಿದ ಹೆಡಿಯಾಲ ಅರಣ್ಯ ಇಲಾಖೆ ಸಿಬ್ಬಂದಿ ಬೋನಿಟ್ಟಿದ್ದರು. ಇದರಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮದ್ದೂರು ವಲಯದ ಅರಣ್ಯಕ್ಕೆ ಚಿರತೆಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.