ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಯ ಅವಾಂತರದಿಂದ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಭೂಗತ ಕೇಬಲ್ ಹಾಗೂ ಪೈಪ್ ಲೈನ್ ಗಾಗಿ ಅಗೆದು ಹಾಕಿದ ಹೊಂಡಕ್ಕೆ ಬಿದ್ದು ಯುವಕ ಗಾಯಗೊಂಡ ಘಟನೆ ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ನಡೆದಿದೆ.
ಕಾಮಗಾರಿಗಾಗಿ ಹೊಂಡ ತೆಗೆದು ಅದನ್ನು ಮುಚ್ಚದೇ ಬಿಡಲಾಗಿತ್ತು. ಬೈಕ್ ಸಹಿತ ಹೊಂಡಕ್ಕೆ ಬಿದ್ದು ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಹೊಂಡದಲ್ಲಿ ನೀರು ತುಂಬಿದ್ದ ಕಾರಣ ಮೇಲೆ ಬರಲಾಗದೇ ಪರದಾಟ ನಡೆಸಿದ್ದಾರೆ.
ಬಳಿಕ ಸ್ಥಳೀಯರು ಸೇರಿ ಹೊಂಡಕ್ಕೆ ಬಿದ್ದ ಯುವಕನನ್ನು ರಕ್ಷಣೆ ಮಾಡಿದ್ದಾರೆ. ಕಾಂಕ್ರೀಟ್ ರಸ್ತೆಗೆ ತಾಗಿಕೊಂಡೇ ಬೃಹದಾಕಾರದ ಹೊಂಡ ನಿರ್ಮಾಣ ಮಾಡಲಾಗಿತ್ತು.
ಜನನಿಬಿಡ ರಸ್ತೆಯಲ್ಲಿ ಹೊಂಡ ತೆಗೆದು ತಡೆಗೋಡೆ ನಿರ್ಮಿಸದೇ ಬೇಜವಾಬ್ದಾರಿ ತೋರಿಸಲಾಗಿದೆ.
ಈ ಘಟನೆ ಬಗ್ಗೆ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ವಿರುದ್ದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ