Monday, April 21, 2025
Google search engine

Homeರಾಜಕೀಯಬಿಜೆಪಿ ಹೊಸ ನಾಯಕರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡುತ್ತಿದ್ದಾರೆ: ಶಿವಾನಂದ ಪಾಟೀಲ ಸಮಜಾಯಿಷಿ

ಬಿಜೆಪಿ ಹೊಸ ನಾಯಕರು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡುತ್ತಿದ್ದಾರೆ: ಶಿವಾನಂದ ಪಾಟೀಲ ಸಮಜಾಯಿಷಿ

ವಿಜಯಪುರ: ಲೋಕಸಭೆ ಚುನಾವಣೆ ರಾಜಕೀಯ ಕಾರಣಕ್ಕೆ ಬಿಜೆಪಿ ಹೊಸ ನಾಯಕರು ರೈತರು, ಸಾಲಮನ್ನಾ ವಿಷಯದಲ್ಲಿ ನಾನು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿನ ನನ್ನ ಮಾತನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಚುನಾವಣೆ ಗೆಲ್ಲುವ ಕುರಿತು ಪಕ್ಷ ಬಿಜೆಪಿ ಹೊಸ ನಾಯಕರಿಗೆ ನೀಡಿರುವ ಗುರಿ ಗೆಲ್ಲುವುದಕ್ಕಾಗಿ ನನ್ನ ಹೇಳಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಿಪಕ್ಷಗಳ ವಿರುದ್ಧ ಹರಿಹಾಯ್ದರು.

ದೇಶದಲ್ಲಿ ಈ ಹಿಂದೆ ಭೀಕರ ಬರ ಆವರಿಸಿದ್ದಾಗ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ದೇಶದ ರೈತರ 72 ಸಾವಿರ ಕೋಟಿ ರೂ‌. ಸಾಲ ಮನ್ನಾ ಮಾಡಿದ್ದರು. ರಾಜ್ಯ ಸರ್ಕಾರ ಬರದ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಲಿ ಎಂದು ಬಯಸುವ ಬಿಜೆಪಿ ನಾಯಕರು, ಕೇಂದ್ರದಲ್ಲಿ ತಮ್ಮದೇ ಸರ್ಕಾರ ಅಧಿಕಾರದಲ್ಲಿದೆ, ದೇಶದ 14 ರಾಜ್ಯಗಳಲ್ಲಿ ಭೀಕರ ಬರ ಆವರಿಸಿದ್ದು, ಸಾಲಮನ್ನಾ ಮಾಡಿಸಲಿ ಎಂದು ಸವಾಲು ಹಾಕಿದರು.

ಕೇಂದ್ರದ ಬಿಜೆಪಿ ಸರ್ಕಾರ ರೈತ ವಿರೋಧಿ ಎಪಿಎಂಸಿ ಕಾನೂನು ಜಾರಿಗೆ ತಂದುದನ್ನು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿತ್ತು. ತಮ್ಮ ಇಂಥ ತಪ್ಪುಗಳನ್ನು ಮುಚ್ಚಿಕೊಳ್ಳಲು ಹೀಗೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಕೇಂದ್ರ ಸರ್ಕಾರ ಸಕ್ಕರೆ, ಕೊಬ್ಬರಿ, ಈರುಳ್ಳಿ ರಫ್ತು ಸ್ಥಗಿತ ಮಾಡಿದ್ದರಿಂದ ಬೆಲೆ ಕುಸಿತವಾಗಿದೆ. ಕಬ್ಬು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 60 ರೂ. ಗೆ ಕೆಜಿ ಮಾರಾಟವಾಗುತ್ತದೆ. ಆದರೆ ರಾಜ್ಯದಲ್ಲಿ ನಾವು ಪ್ರತಿ ಟನ್ ಕಬ್ಬಿಗೆ 3500 ರೂ. ದರ ನೀಡುವ ಅವಕಾಶ ಇದ್ದರೂ ಕೇಂದ್ರದ ನೀತಿಯಿಂದಾಗಿ 3100 ರೂ. ದರ ನೀಡುತ್ತಿದ್ದೇವೆ ಎಂದು ಕಿಡಿ ಕಾರಿದರು.

ಕೊಬ್ಬರಿ ಮೌಲ್ಯವರ್ಧನೆ ಮಾಡಿ ಜನರಿಗೆ ಹಂಚುವ ಬದಲು ನಮ್ಮ ರಾಜ್ಯದವರೇ ಒಬ್ಬರು ಕೊಬ್ಬರಿ ಬೆಲೆ ಕುಸಿದಿದೆ ಎಂದು ಕೇಂದ್ರಕ್ಕೆ ಮನವಿ ಕೊಡುತ್ತಿದ್ದಾರೆ. ಮತ್ತೊಂದೆಡೆ ಕೆಲವೇ ತಿಂಗಳ ಹಿಂದೆ ಟೊಮ್ಯಾಟೊ ಬೆಲೆ ಹೆಚ್ಚಳವಾಗಿ ಕೆಲವು ರೈತರು ಒಂದಷ್ಟು ಲಾಭ ಮಾಡಿಕೊಳ್ಳುವ ಹಂತದಲ್ಲಿ ಬಿಜೆಪಿ ಸರ್ಕಾರ ತಡೆಯಿತು. ಇದೆಲ್ಲ ಕೇಂದ್ರ ಸರ್ಕಾರ ರೈತರಿಗೆ ಮಾಡುವ ಶೋಷಣೆ ಅಲ್ಲವೇ ಎಂದು ವಿಪಕ್ಷಗಳ ನಾಯಕರ ಟೀಕೆಗಳಿಗೆ ತಿರುಗೇಟು ನೀಡಿದರು.

ಹಿಂದೆ ಸರ್ಕಾರ ನಡೆಸಿದ ಮುಖ್ಯಮಂತ್ರಿಗಳು ನೀರು, ವಿದ್ಯುತ್, ಬೀಜ, ಗೊಬ್ಬರ ಉಚಿತವಾಗಿ ನೀಡಿದರು. ಇಂಥ ಎಲ್ಲವನ್ನೂ ಸರ್ಕಾರವಾಗಿ ನಾವು ಮಾಡುತ್ತಿದ್ದೇವೆ. ಆದರೆ ರೈತರು  ಬೆಳೆಗೆ ವೈಜ್ಞಾನಿಕ ಬೆಲೆ ಕೊಡದೇ, ರೈತರನ್ನು ಸಶಕ್ತರನ್ನಾಗಿ ಮಾಡಲಿಲ್ಲ. ಇದೇ ಅರ್ಥದಲ್ಲಿ ನಾನು ಹೇಳಿದ್ದು ಎಂದು ಸಮಜಾಯಿಷಿ ನೀಡಿದರು.

RELATED ARTICLES
- Advertisment -
Google search engine

Most Popular