Saturday, April 19, 2025
Google search engine

Homeಸ್ಥಳೀಯರೈತರ ಸಾಲಮನ್ನಾ ಮಾಡಲಾಗದಿದ್ದರೆ ಕನಿಷ್ಠ ಬಡ್ಡಿಮನ್ನಾ ಮಾಡಿ: ಶಾಸಕ ಜಿ.ಟಿ.ದೇವೇಗೌಡ

ರೈತರ ಸಾಲಮನ್ನಾ ಮಾಡಲಾಗದಿದ್ದರೆ ಕನಿಷ್ಠ ಬಡ್ಡಿಮನ್ನಾ ಮಾಡಿ: ಶಾಸಕ ಜಿ.ಟಿ.ದೇವೇಗೌಡ

ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ರಾಜ್ಯ ಸರ್ಕಾರಕ್ಕೆ ರೈತರ ಸಾಲ ಮನ್ನಾ ಮಾಡಲು ಸಾಧ್ಯವಾಗದೇ ಇದ್ದಲ್ಲಿ ಕನಿಷ್ಟ ಪಕ್ಷ ಸಂಪೂರ್ಣ ಬಡ್ಡಿ ಮನ್ನಾ ಮಾಡಿ ೨೦೨೫ನೇ  ಸಾಲಿನ ವರೆಗೆ ಸಾಲ ವಸೂಲಾತಿ ಮುಂದೂಡಬೇಕು ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಒತ್ತಾಯಿಸಿದರು.

ಇಲ್ಲಿನ ನವನಗರ ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ರಜತ ಮಹೋತ್ಸವ ಪ್ರಯುಕ್ತ ಬ್ಯಾಂಕ್ ಆಡಳಿತ ಕಚೇರಿಗೆ ಸೋಮವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಸದನದಲ್ಲಿ ಒತ್ತಾಯಿಸಿದ್ದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುವುದಾಗಿ ಹೇಳಿದ್ದಾರೆ, ಇದರಿಂದ ರೈತರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬರಗಾಲ ಆವರಿಸಿದೆ. ಮಳೆ ಇಲ್ಲ, ಬೆಳೆ ಇಲ್ಲ. ಬಡ್ಡಿನೇ ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ, ಇಂತಹ ಪರಿಸ್ಥಿತಿಯಲ್ಲಿ ರೈತರು ಅಸಲು ಎಲ್ಲಿಂದ ಕಟ್ಟುತ್ತಾರೆ ಎಂದು ಪ್ರಶ್ನಿಸಿದ ಅವರು, ರೈತರ ಪರವಾಗಿ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ರೈತರ ಸಂಪೂರ್ಣ ಬಡ್ಡಿ ರಾಜ್ಯ ಸರ್ಕಾರವೇ ಭರಿಸಬೇಕು, ಸಾಲದ ಅವಧಿ ಮುಂದೂಡಬೇಕು. ೨೦೨೫ನೇ ಸಾಲಿನ ವರೆಗೆ ವಸೂಲಾತಿ ಮಾಡಬಾರದು ಎಂದು ಒತ್ತಾಯಿಸಿದರು.

ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ರಜಿತ ಮಹೋತ್ಸವ ಪ್ರಯುಕ್ತ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷರಾದ ದಿವಂಗತ ಎಸ್.ನಂಜಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಅವರೊಂದಿಗೆ ಬ್ಯಾಂಕಿನ ಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಎಸ್.ನಂಜಪ್ಪ ಅವರು ಬ್ಯಾಂಕ್ ಬಹಳ ಎತ್ತರಕ್ಕೆ ಬೆಳೆಸಿದ್ದಾರೆ. ಇದರ ಕೀರ್ತಿ ದಿ.ಎಸ್.ನಂಜಪ್ಪನವರಿಗೆ ಸಲ್ಲುತ್ತದೆ. ಬ್ಯಾಂಕ್ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.

ನವನಗರ ಅರ್ಬನ್ ಕೋ-ಅಪರೆಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ನಂಜಪ್ಪ, ತಂಬಾಕು ಮಂಡಳಿ ನಿವೃತ್ತ ಅಧಿಕಾರಿ ಕೆ.ಎನ್.ದಿನೇಶ್ ನಂಜಪ್ಪ, ಉದ್ಯಮಿ ಶಿವಕುಮಾರ್, ಬ್ಯಾಂಕ್ ನಿರ್ದೇಶಕರಾದ ಕೇಶವ್, ಅಪ್ಪರ್ ಬಾಬು, ವೈ.ಎಸ್.ಕುಮಾರ್, ಸಯ್ಯದ್ ಅಸ್ಲಂ, ಮುಖಂಡರಾದ ರಂಗನಾಥ್, ಮಿರ್ಲೆ ಸುಜಯ್ ಗೌಡ, ಶಿವಲಿಂಗೇಗೌಡ, ಮರಿಗೌಡ, ಡಾ.ಶರತ್, ವಕೀಲರಾದ ಶರತ್, ಪಾಲಾಕ್ಷ, ಚಿಕ್ಕವೀರು, ಹನುಮೇಷ್ ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular