ಮೈಸೂರು: ಜನಪದ ಕಲೆಗಳು ಹಾಗೂ ಜನಪರ ಉತ್ಸವಗಳು ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ ಎಂದು ವಿಧಾನ ಪರಿಷತ್ತಿನ ಶಾಸಕರಾದ ಡಾ. ಡಿ ತಿಮ್ಮಯ್ಯ ಅವರು ತಿಳಿಸಿದರು.
ಇಂದು ತಲಕಾಡಿನ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಮೈಸೂರು ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ತಲಕಾಡು ಗ್ರಾಮ ಪಂಚಾಯಿತಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜು, ಸರ್ಕಾರಿ ಪ್ರೌಢಶಾಲೆ ಹಾಗೂ ಸುಬ್ಬಣ್ಣ ಬಾಲಕಿಯರ ಪ್ರೌಢಶಾಲೆ, ತಲಕಾಡು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜನಪರ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪರ ಉತ್ಸವ ಈ ನೆಲದ ಜನರ ಮತ್ತು ಕಲೆಗಳ ಸಂಭ್ರಮದ ಸಾಂಸ್ಕೃತಿಕ ಹಬ್ಬವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ಪ್ರಕಾರಗಳ ಅನೇಕ ಕಲಾತಂಡಗಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಾ ಬಂದಿದೆ ಎಂದರು.
ಸಿದ್ದರಾಮಯ್ಯನವರ ಆಡಳಿತದ ಸಮಯದಲ್ಲಿ ಬಡವರಿಗೆ, ನಿರ್ಗತಿಕರಿಗೆ, ದಲಿತರಿಗೆ, ಮಹಿಳೆಯರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಸಮಾಜ ಪರ ಕೆಲಸಗಳನ್ನು ಮಾಡಲಾಗುತ್ತಿದೆ. ಈ ಬಾರಿ ತಂದಂತಹ ಹಲವಾರು ಯೋಜನೆಗಳು ಸ್ತ್ರೀ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತವೆ. ಸ್ತ್ರೀಯರನ್ನು ಕಡೆಗಣಿಸುವ ಈ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರನ್ನು ತಾಯಿಯಂತೆ, ದೇವರಂತೆ ಕಾಣುವ ಪರಿಸ್ಥಿತಿ ಕಣ್ಮರೆಯಾಗಿದೆ. ಯಾವುದೇ ಧರ್ಮ ಜಾತಿಗೆ ಮೀಸಲಾಗಿರಿಸದೇ ದೇಶದ ಏಕತೆ ಹಾಗೂ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಆಲೋಚನೆಗಳಿಗೆ ಪೂರಕವಾಗಿ ಡಾ. ಹೆಚ್ ಸಿ ಮಹದೇವಪ್ಪನವರು ಕಾರ್ಯೋನ್ಮುಖರಾಗಿದ್ದಾರೆ ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಎಂ.ಡಿ ಸುದರ್ಶನ್ ಅವರು ಮಾತನಾಡಿ, ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿ ಕಲಾವಿದರಿಗಾಗಿ ಜನಪರ ಉತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಲಾವಿದರಿಂದ ಅರ್ಜಿ ಆಹ್ವಾನಿಸಿ, ಕಡೆಗಣಿಸಲ್ಪಟ್ಟ ವಿವಿಧ ಕಲಾ ಪ್ರಕಾರಗಳನ್ನು ಹಾಗೂ ಇದುವರೆಗೂ ಅವಕಾಶ ಸಿಗದ ಕಲಾವಿದರನ್ನು ಗುರುತಿಸಿ ಅವಕಾಶ ಕಲ್ಪಿಸಲಾಗಿದೆ. ಸ್ಥಳೀಯ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ತಲಕಾಡಿನಲ್ಲಿ ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಗಳಾದ ರವಿಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶೋಭಾ ಮಲ್ಲಣ್ಣಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಹೇಶ್, ತಲಕಾಡಿನ ವಿವಿಧ ಶಾಲಾ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಕಲಾವಿದರು ಭಾಗವಹಿಸಿದ್ದರು.