ಚಾಮರಾಜನಗರ: ಪದವಿ, ಡಿಪ್ಲೋಮೊ ಮುಗಿಸಿ 6 ತಿಂಗಳು ಕಳೆದರೂ ಉದ್ಯೋಗ ಲಭಿಸದೆ ಇರುವವರಿಗೆ ನಿರುದ್ಯೋಗ ಭತ್ಯೆ ನೀಡುವ ರಾಜ್ಯ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಯ ನೊಂದಣಿ ಪ್ರಕ್ರಿಯೆ ಇಂದಿನಿಂದ (ಡಿ.26) ಆರಂಭಗೊಂಡಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ಯುವನಿಧಿ ಯೋಜನೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಯುವನಿಧಿ ಯೋಜನೆಯ ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು.
2022-23ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ 2023ರಲ್ಲಿ ತೇರ್ಗಡೆಯಾಗಿ 6 ತಿಂಗಳು ಆದರೂ ಉದ್ಯೋಗ ಸಿಗದೆ ಇರುವ ಪದವಿ, ಡಿಪ್ಲೋಮೊ ನಿರುದ್ಯೋಗಿಗಳು ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯಬಹುದು. ಪದವೀಧರರಿಗೆ ಮಾಸಿಕ 3 ಸಾವಿರ ರೂ., ಡಿಪ್ಲೋಮೊ ತೇರ್ಗಡೆಯಾದವರಿಗೆ 1,500ರೂ. ಭತ್ಯೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ. ಯುವನಿಧಿ ಯೋಜನೆಗೆ ನೊಂದಣಿ ಪ್ರಾರಂಭವಾಗಿದೆ. ಯೋಜನೆಯಲ್ಲಿ ನೊಂದಾಯಿಸಿದ ನಂತರ ಎರಡು ವರ್ಷದವರೆಗೆ ನಿರುದ್ಯೋಗ ಭತ್ಯೆ ನೀಡಲಾಗುವುದು. ಭತ್ಯೆಯನ್ನು ಡಿಬಿಟಿ ಮುಖಾಂತರ ನೀಡಲಾಗುತ್ತದೆ. ಎರಡು ವರ್ಷದ ಅವಧಿಯೊಳಗೆ ಉದ್ಯೋಗ ದೊರೆತಲ್ಲಿ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುತ್ತದೆ.
ಉನ್ನತ ವ್ಯಾಸಂಗಕ್ಕೆ ದಾಖಲಾಗಿರುವವರು, ಶಿಶುಕ್ಷು ವೇತನವನ್ನು ಪಡೆಯುತ್ತಿರುವವರು, ಸರ್ಕಾರಿ, ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವವರು, ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಗಳಡಿ ಬ್ಯಾಂಕ್‍ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಮಾಡುವವರು ಯೋಜನೆಗೆ ಅರ್ಹರಿರುವುದಿಲ್ಲ. ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರೆಸದೆ ಇರುವವರು, ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳ ವಾಸವಿರುವ ಪದವಿ, ಡಿಪ್ಲೋಮೊ ಅಧ್ಯಯನ ಮಾಡಿರುವವರು ಯೋಜನೆಗೆ ಅರ್ಹರಾಗಲಿದ್ದಾರೆ. ಯೋಜನೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಅರ್ಹ ಪದವೀಧರರು, ಡಿಪ್ಲೋಮೊದಾರರು https://sevasindhugs.karnataka.gov.ನಲ್ಲಿ, ಬಾಪೂಜಿ ಸೇವಾಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಯಾವುದೇ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಬಹುದು.
ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೋಮೊ ಅಂಕಪಟ್ಟಿ ಪ್ರಮಾಣ ಪತ್ರದೊಂದಿಗೆ ನೊಂದಣಿ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೌಶಲ್ಯಾಭಿವೃದ್ದಿ ಇಲಾಖೆ ಅಥವಾ ದೂ.ಸಂ 08226-295080 ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಉಪಕಾರ್ಯದರ್ಶಿ ಲಕ್ಷ್ಮಿ, ತಹಶೀಲ್ದಾರ್ ಬಸವರಾಜು, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ, ಜೀವನೋಪಾಯ ಇಲಾಖೆಯ ಅಧಿಕಾರಿ ಮಲ್ಲೇಶ್, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.