ನವದೆಹಲಿ: ಕಾಂಗ್ರೆಸ್ ಪಕ್ಷವು ಮಣಿಪುರದಿಂದ ಮಹಾರಾಷ್ಟ್ರದವರೆಗೆ ‘ಭಾರತ ನ್ಯಾಯ ಯಾತ್ರೆ’ ಆರಂಭಿಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬುಧವಾರ ಘೋಷಿಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಪಕ್ಷ ಇದೀಗ ದೇಶದ ಈಶಾನ್ಯ ಮತ್ತು ಪಶ್ಚಿಮ ರಾಜ್ಯಗಳನ್ನು ಸಂಪರ್ಕಿಸುವ ಯಾತ್ರೆ ರಾಹುಲ್ ಗಾಂಧಿ ಸಾರಥ್ಯದಲ್ಲಿ ನಡೆಯಲಿದೆ ಎಂದು ಕಾಂಗ್ರೆಸ್ ಘೋಷಿಸಿದೆ.
ಮಣಿಪುರದಿಂದ ಮುಂಬೈವರೆಗಿನ ಸುಮಾರು 6,200 ಕಿಲೋ ಮೀಟರ್ ದೂರದ ಈ ಯಾತ್ರೆ ಜನವರಿ 14ರಿಂದ ಆರಂಭಗೊಳ್ಳಲಿದ್ದು, ಮಾರ್ಚ್ 20ರಂದು ಕೊನೆಗೊಳ್ಳಲಿದೆ.
ಕಳೆದ ವರ್ಷ ರಾಹುಲ್ ಗಾಂಧಿ ದಕ್ಷಿಣ ಮತ್ತು ಉತ್ತರದ ರಾಜ್ಯಗಳನ್ನು ಸಂಪರ್ಕಿಸುವ ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದು, ಇದರ ಪರಿಣಾಮ ದಕ್ಷಿಣದ ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಲಾಭ ತಂದುಕೊಟ್ಟಿರುವುದಾಗಿ ವರದಿ ವಿಶ್ಲೇಷಿಸಿದೆ.
ಭಾರತ್ ನ್ಯಾಯ ಯಾತ್ರೆಯ ಘೋಷಣೆ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿರುವ ಬಿಜೆಪಿ, ಜನರು ಭಾರತ್ ಜೋಡೋ ಯಾತ್ರೆಯನ್ನು ತಿರಸ್ಕರಿಸಿರುವುದಾಗಿ ಟೀಕಿಸಿದೆ.
ಭಾರತ್ ನ್ಯಾಯ ಯಾತ್ರೆಗೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಇಂಫಾಲ್ ನಲ್ಲಿ ಹಸಿರು ನಿಶಾನೆ ಮೂಲಕ ಚಾಲನೆ ನೀಡಲಿದ್ದು, ರಾಹುಲ್ ಗಾಂಧಿ ನೇತೃತ್ವದ ಈ ಯಾತ್ರೆಯು 14 ರಾಜ್ಯಗಳ 85 ಜಿಲ್ಲೆಗಳಲ್ಲಿ ಹಾದು ಹೋಗಲಿದೆ ಎಂದು ವರದಿ ತಿಳಿಸಿದೆ.
ಕಾಂಗ್ರೆಸ್ ಪಕ್ಷದ ಭಾರತ್ ನ್ಯಾಯ ಯಾತ್ರೆಯು ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ, ಮೇಘಾಲಯ, ಪಶ್ಚಿಮ ಬಂಗಾಳ, ಬಿಹಾರ, ಒಡಿಶಾ, ಛತ್ತೀಸ್ ಗಢ್, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ್, ಗುಜರಾತ್ ಮತ್ತು ಮಹಾರಾಷ್ಟ್ರ ಒಳಗೊಂಡಿರುವುದಾಗಿ ತಿಳಿಸಿದೆ.
ಭಾರತ್ ನ್ಯಾಯ ಯಾತ್ರೆಯು ದೇಶದ ಜನರಿಗೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನ್ಯಾಯವನ್ನು ಖಾತರಿಪಡಿಸುವುದಾಗಿದೆ ಎಂದು ಕಾಂಗ್ರೆಸ್ ಪಕ್ಷ ಹೇಳಿದೆ.
ದ್ವಂದ್ವದ ದೃಷ್ಟಿಕೋನ: ಬಿಜೆಪಿ ಟೀಕೆ
ಯಾತ್ರೆಯ ಹೆಸರಿನಲ್ಲಿ ಕೆಲವು ಘೋಷಣೆಗಳನ್ನು ಹಾಕಿ ಜನರನ್ನು ಮೂರ್ಖರನ್ನಾಗಿಸಲು ಸಾಧ್ಯವಿಲ್ಲ ಎಂದು ಭಾರತೀಯ ಜನತಾ ಪಕ್ಷ ತಿರುಗೇಟು ನೀಡಿದೆ. ರಾಹುಲ್ ಗಾಂಧಿಯಿಂದಾಗಿ ದೇಶದ ಜನರು ಭಾರತ್ ಜೋಡೋ ಯಾತ್ರೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಕೆಲವು ಘೋಷಣೆಗಳ ಮೂಲಕ ಜನರನ್ನು ಮೂರ್ಖರನ್ನಾಗಿಸಬಹುದು ಎಂದು ಕಾಂಗ್ರೆಸ್ ಭಾವಿಸಿದಂತಿದೆ ಎಂದು ಬಿಜೆಪಿ ವಕ್ತಾರ ನಳೀನ್ ಕೊಹ್ಲಿ ಟೀಕಿಸಿದ್ದಾರೆ.
2014ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನತೆಗೆ ನಿಜವಾದ ನ್ಯಾಯವನ್ನು ಒದಗಿಸಿಕೊಟ್ಟಿದೆ. ಕಾಂಗ್ರೆಸ್ ಗಿಮಿಕ್ ಗಳ ಮೂಲಕ ಜನರ ದಿಕ್ಕುತಪ್ಪಿಸಲು ಮುಂದಾಗಿದೆ ಎಂದು ಕೊಹ್ಲಿ ಆರೋಪಿಸಿದರು.