ಬೆಂಗಳೂರು: ಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ವತಿಯಿಂದ ಪ್ರತಿಭಟನಾ ರ‍್ಯಾಲಿ ನಡೆಸಿದರು.
ನಗರದ ಲಾವೆಲ್ಲಿ ರಸ್ತೆಯಲ್ಲಿರುವ ಅಂಗಡಿಗಳ ಇಂಗ್ಲಿಷ್ ಬೋರ್ಡ್ಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ದೊಣ್ಣೆಯಿಂದ ಬೋರ್ಡ್ಗಳನ್ನ ಒಡೆದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಕಾರ್ಯಕರ್ತರನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಶಕ್ಕೆ ಪಡೆದರು.
ವಾಣಿಜ್ಯ ಮಳಿಗೆಗಳ ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡ ಅಕ್ಷರಗಳ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಿ ಫೆಬ್ರುವರಿ 28ರವರೆಗೆ ಗಡುವು ಎಂದು ಸುತ್ತೋಲೆ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ಬೆನ್ನಲ್ಲೇ ಕರವೇ ಕಾರ್ಯಕರ್ತರು ಬೀದಿಗಿಳಿದು ವಾಣಿಜ್ಯ ಮಳಿಗೆಗಳ ವಿರುದ್ಧ ಅಕ್ರೋಶ ಹೊರಹಾಕಿದರು.
ದೇವನಹಳ್ಳಿಯ ಸಾದಹಳ್ಳಿ ಟೋಲ್ನಿಂದ ಬೆಂಗಳೂರು ಕಬ್ಬನ್ ಪಾರ್ಕ್ ವರೆಗೆ ರ‍್ಯಾಲಿ ಹಮ್ಮಿಕೊಂಡಿದ್ದ ಕರವೇ ಕಾರ್ಯಕರ್ತರು ಎಂ.ಜಿ.ರಸ್ತೆ , ಬ್ರಿಗೇಡ್ ರಸ್ತೆ, ಯುಬಿ ಸಿಟಿ ರಸ್ತೆಗಳಲ್ಲಿ ಕನ್ನಡ ಬಳಸದ ಮಳಿಗೆಗಳ ವಿರುದ್ಧ ಆಕ್ರೋಶ ತೋರಿದರು. ಕಾರ್ಯಕರ್ತರು ಇಂಗ್ಲಿಷ್ ನಾಮಫಲಕ ಹೊಂದಿದ್ದ ಎಂ.ಜಿ ರಸ್ತೆಯ ಕೆನರಾ ಬ್ಯಾಂಕ್ ಬೋರ್ಡ್ ಸೇರಿದಂತೆ ಕೆಲ ಆಂಗ್ಲ ಭಾಷಾ ನಾಮಫಲಕಗಳನ್ನು ಪುಡಿಗಟ್ಟಿದರು.
ಇದೇ ಸಂದರ್ಭದಲ್ಲಿ ಪೊಲೀಸರು ಬರುತ್ತಿದ್ದಂತೆ ಕೆಲ ಕಾರ್ಯಕರ್ತರು ದಿಕ್ಕಾಪಾಲಾಗಿ ಓಡಿದ ಪ್ರಸಂಗವೂ ನಡೆಯಿತು.
ಮುನ್ನೆಚ್ಚರಿಕಾ ಕ್ರಮವಾಗಿ ಹಲವು ಕಾರ್ಯಕರ್ತರನ್ನ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ವಶಕ್ಕೆ ಪಡೆದರು.
ರ‍್ಯಾಲಿ ಹಿನ್ನೆಲೆಯಲ್ಲಿ ಸಾದಹಳ್ಳಿ ಟೋಲ್ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಡಿಸಿಪಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಎಸಿಪಿ, 6 ಮಂದಿ ಇನ್ಸ್ಪೆಕ್ಟರ್, 12 ಸಬ್ ಇನ್ಸ್ಪೆಕ್ಟರ್ಗಳು ಸೇರಿದಂತೆ 500 ಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.