Saturday, April 19, 2025
Google search engine

Homeರಾಜ್ಯಅಣ್ಣ ನಾಡಕಳ್ಳ ತಮ್ಮ ಕಾಡುಗಳ್ಳ : ಪ್ರತಾಪ್, ವಿಕ್ರಂ ಸಿಂಹ ವಿರುದ್ಧ ಜಾಲತಾಣದಲ್ಲಿ ಲೇವಡಿ

ಅಣ್ಣ ನಾಡಕಳ್ಳ ತಮ್ಮ ಕಾಡುಗಳ್ಳ : ಪ್ರತಾಪ್, ವಿಕ್ರಂ ಸಿಂಹ ವಿರುದ್ಧ ಜಾಲತಾಣದಲ್ಲಿ ಲೇವಡಿ

ಬೆಂಗಳೂರು: ಅಣ್ಣ ಪ್ರತಾಪ್ ಸಿಂಹ ನಾಡಕಳ್ಳ, ತಮ್ಮ ವಿಕ್ರಂ ಸಿಂಹ ಕಾಡುಗಳ್ಳ ಎಂದು ಕಾಂಗ್ರೆಸ್ ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತವರ ಸಹೋದರನ ವಿರುದ್ಧ ಲೇವಡಿ ಮಾಡಿದೆ.
ಹುಣಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಮುಗಿಬಿದ್ದಿರುವ ಕಾಂಗ್ರೆಸ್ ಪ್ರತಾಪ್ ಸಿಂಹ ಸಹೋದರ ಮರಗಳನ್ನು ಕದ್ದು ಸಾಗಿಸಿದ್ದಾರೆಂದು ಆರೋಪಿಸಿ, ವಿಕ್ರಂಸಿಂಹ ಹೆಸರಿನೊಂದಿಗೆ ಪ್ರತಾಪ್ ಸಿಂಹ ಹೆಸರು ತಳುಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯವಾಡಿದೆ.

ಹತ್ತಾರು ಎಕರೆಯಲ್ಲಿದ್ದ ಸಾವಿರಾರು ಮರಗಳನ್ನು ಮಾರಣ ಹೋಮ ಮಾಡಿ, ಕಳ್ಳಸಾಗಣೆಗೆ ಮುಂದಾಗಿದ್ದ ಪ್ರತಾಪ್ ಸಿಂಹನ ಸಹೋದರನ ಮೇಲೆ ಪ್ರಕರಣ ದಾಖಲಿಸಿ ತನಿಖೆ ಮಾಡಲಾಗುತ್ತಿದೆ. ವೀರಪ್ಪನ್ ನಿಂದ ತೆರವಾದ ಸ್ಥಾನಕ್ಕೆ ತಮ್ಮ ಸಹೋದರನನ್ನು ಪ್ರತಿಷ್ಠಾಪಿಸಲು ಮುಂದಾಗಿರುವಂತಿದೆ ಪ್ರತಾಪ್ ಸಿಂಹ! ಈ ಅಣ್ಣ ತಮ್ಮಂದಿರಿಂದ ನಾಡು, ಕಾಡು ಎರಡಕ್ಕೂ ಆಪತ್ತು ಅಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಮುಂದುವರಿದು, ಸೋಮಾಲಿಯಾದ ಕಡಲುಗಳ್ಳರನ್ನೂ ಮೀರಿ ಬಿಜೆಪಿ ಕರ್ನಾಟಕವನ್ನು ಲೂಟಿ ಮಾಡಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದ್ದು, ಕೊರೊನಾ ಸಾಂಕ್ರಾಮಿಕದ ರೋಗ ಹರಡಿದ ವೇಳೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಂದಾಜು ೪೦ ಸಾವಿರ ಕೋಟಿ ರೂ.ಗಳ ಭ್ರಷ್ಟಾಚಾರ ಎಸಗಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದನ್ನೆ ಅಸ್ತ್ರವಾಗಿಸಿಕೊಂಡು, ಯತ್ನಾಳ್ ಆರೋಪ ನೋಡಿದರೆ ಬಿಜೆಪಿಗರು ಕರ್ನಾಟಕವನ್ನು ಸೋಮಾಲಿಯಾದ ಕಡಲುಗಳ್ಳರನ್ನೂ ಮೀರಿಸುವಂತೆ ಲೂಟಿ ಹೊಡೆದಿದ್ದಾರೆಯೇ ಬಿಜೆಪಿಯ ಒಳಜಗಳದಲ್ಲಿ ಬಿಜೆಪಿಗರ ಬಾಯಿಯಿಂದಲೇ ಅವೆಲ್ಲವೂ ಬಯಲಾಗುತ್ತಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಕೋವಿಡ್ ಕಾಲದಲ್ಲಿ ಶ್ಯಾಡೋ ಸಿಎಂ ಆಗಿದ್ದ ಬಿ.ವೈ.ವಿಜಯೇಂದ್ರ ಅವರೇ, ೪೫ ರೂಪಾಯಿಯ ಮಾಸ್ಕು ೪೮೦ ರೂಪಾಯಿಯಾಗಿದ್ದು ಹೇಗೆ? ಹೆಚ್ಚುವರಿ ೪೩೫ ರೂಪಾಯಿ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್‌ಗೆ ಸೇರಿದ ಹಣವೇ? ೪೦ ಸಾವಿರ ಕೋಟಿ ರೂಪಾಯಿಯ ಯತ್ನಾಳ್ ಆರೋಪ ಸುಳ್ಳು ಎಂದಾದರೆ ಬಿಜೆಪಿ ನ್ಯಾಯಾಂಗ ತನಿಖೆಗೆ ಒತ್ತಾಯಿಸುವುದೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಸ್ವತಃ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದರೂ, ಬಿಎಸ್‌ವೈ ಅಂಡ್ ಸನ್ಸ್ ವಿರುದ್ಧ ಇಷ್ಟೆಲ್ಲಾ ಮಾತಾಡಿದರೂ ಯತ್ನಾಳ್ ವಿರುದ್ಧ ಬಿಜೆಪಿ ಪಕ್ಷ ಕಠಿಣ ಕ್ರಮ ಕೈಗೊಳ್ಳದಿರುವುದು ನೋಡಿದರೆ ೪೦ ಸಾವಿರ ಕೋಟಿಯ ಹಗರಣದ ಕಬಂದ ಬಾಹುಗಳು ವಿಸ್ತಾರವಾಗಿ ಹಬ್ಬಿರುವುದು ಸ್ಪಷ್ಟ. ಮಾಜಿ ಶ್ಯಾಡೋ ಸಿಎಂ ವಿಜಯೇಂದ್ರ ಅವರೇ, ಕೋವಿಡ್ ಹಗರಣದ ಬಗ್ಗೆ ಮೌನಕ್ಕೆ ಜಾರಿರುವುದೇಕೆ? ತಮ್ಮಲ್ಲಿ ಸಾಚಾತನವಿದ್ದರೆ ಈ ಹಗರಣದ ತನಿಖೆಗೆ ಒತ್ತಾಯಿಸುತ್ತಿಲ್ಲವೇಕೆ? ಎಂದು ತಪರಾಕಿ ಹಾಕಿದೆ.

೪೦ ಬಿಜೆಪಿಯ ಅದೃಷ್ಟ ಸಂಖ್ಯೆ ಇರಬಹುದೇನೋ, ಕಮಿಷನ್ – ೪೦% ಕೋವಿಡ್ ಹಗರಣ – ೪೦ ಸಾವಿರ ಕೋಟಿ, ಸ್ವತಃ ಬಿಜೆಪಿಯ ಹಿರಿಯ ನಾಯಕರಿಂದಲೇ ಹೊರಬಿದ್ದ ೪೦ ಸಾವಿರ ಕೋಟಿ ರೂಪಾಯಿಯ ಕೋವಿಡ್ ಹಗರಣದ ಬಗ್ಗೆ ವಿಜಯೇಂದ್ರ ಜನತೆಗೆ ಉತ್ತರಿಸದೆ ಮೌನವಾಗಿರುವುದೇಕೆ? ಈ ೪೦ ಸಾವಿರ ಕೋಟಿಯಲ್ಲಿ ಹೈಕಮಾಂಡ್ ನಾಯಕರ ಪಾಲೆಷ್ಟು ಎಂದಿದೆ.

೪೦ ಸಾವಿರ ಕೋಟಿ ಹಗರಣದ ಆರೋಪವನ್ನು ಸ್ವತಃ ಬಿಜೆಪಿಯ ಹಿರಿಯ ನಾಯಕರೇ ಮಾಡಿದ್ದಾರೆ. ಈ ಬಗ್ಗೆ ಉತ್ತರಿಸುವ ಹೊಣೆಗಾರಿಕೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರದ್ದು. ೪೦ ಸಾವಿರ ಕೋಟಿಯಲ್ಲಿ ಯಾರ ಪಾಲೆಷ್ಟು? ಹೆಣದ ಮೇಲೆ ಹಣ ಮಾಡುವ ದುರ್ಬುದ್ಧಿ ಬಂದಿದ್ದೇಕೆ?ಎಂದು ಕಾಂಗ್ರೆಸ್ ಪ್ರಶ್ನಿಸಿದೆ.


RELATED ARTICLES
- Advertisment -
Google search engine

Most Popular