ನಂಜನಗೂಡು: ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ಹರಿದ್ರೋತ್ಸವದ ಅಂಗವಾಗಿ ನಡೆದ ಅಂಧಕಾಸುರನ ಸಂಹಾರ ಕಾರ್ಯಕ್ರಮದ ವೇಳೆ ಅರ್ಚಕರು ಮತ್ತು ದಸಂಸ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.
ನಗರದ ರಾಕ್ಷಸ ಮಂಟಪ ವೃತ್ತದಲ್ಲಿ ಡಿ. ೨೬ ರಂದು ಮಹಿಷಾಸುರನ ಫ್ಲೆಕ್ಸ್ ಎದುರು ನೆಲದ ಮೇಲೆ ರಂಗೋಲಿಯಲ್ಲಿ ಮಹಿಷನ ಚಿತ್ರ ಬರೆದು ಅದನ್ನು ಕಾಲಿನಲ್ಲಿ ತುಳಿಯುವ ಮೂಲಕ ಸಂಹಾರ ಮಾಡಲು ದೇವಸ್ಥಾನದ ಅರ್ಚಕರು ಮತ್ತಿತರರು ಮುಂದಾಗಿದ್ದರು. ಇದನ್ನು ದಸಂಸ ಮುಖಂಡರು ಪ್ರಶ್ನಿಸಿ, ಮಹಿಷ ಈ ಭಾಗದ ಮೂಲ ನಿವಾಸಿಗಳ ರಾಜ. ಅವರ ಸಂಹಾರ ಮಾಡಲು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ದಸಂಸ ಮುಖಂಡರು ಮತ್ತು ನಗರಸಭಾ ಸದಸ್ಯ ಕಪಿಲೇಶ್ ಮತ್ತವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು. ಪರಸ್ಪರ ಘರ್ಷಣೆ ನಡೆಯಿತು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಎರಡೂ ಗುಂಪನ್ನು ಚದುರಿಸಿದರು.
ಕಪಿಲೇಶ್ ಬೆಂಬಲಿಗರು ಮತ್ತು ದೇವಸ್ಥಾನದ ಅರ್ಚಕರು ನಾವು ಹಿಂದಿನಿಂದಲೂ ಈ ಆಚರಣೆಯನ್ನು ಮಾಡಿಕೊಂಡು ಬರುತ್ತಿದ್ದೇವೆ. ಇದನ್ನು ತಡೆಯಲು ನೀವು ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಆದರೇ, ದಸಂಸ ಮುಖಂಡರು ಮಹಿಷಾಸುರ ಮೂಲ ನಿವಾಸಿಗಳ ರಾಜ, ನಮಗೆ ಪೂಜನೀಯ ಇವರ ಚಿತ್ರ ಬರೆದು ಅದನ್ನು ಕಾಲಿನಲ್ಲಿ ತುಳಿದು ಸಂಹಾರ ಮಾಡುವ ಮೂಲಕ ಅರ್ಚಕರು ಮೂಲ ನಿವಾಸಿಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ನಂಜನಗೂಡು ಪೊಲೀಸ್ ಠಾಣೆಯಲ್ಲಿ ನಗರಸಭಾ ಸದಸ್ಯ ಕಪಿಲೇಶ್ ಸೇರಿದಂತೆ ಅನಂತು, ಕಿರಣ, ರಾಜು, ರವಿ ಮತ್ತು ಗಿರೀಶ್ ಮತ್ತಿತರರ ಮೇಲೆ ಐಪಿಸಿ ಸೆಕ್ಷನ್ ೧೮೬೦, (ಯು/ಎಸ್) ೧೪೯, ೨೯೫/೦,೫೦೪,೧೪೩,೩೪ ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ದೇವಸ್ಥಾನದ ವತಿಯಿಂದಲೂ ದಸಂಸ ಮುಖಂಡರುಗಳ ಮೇಲೆ ಪ್ರತಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.