ಬೆಂಗಳೂರು: ಶೇ.60ರಷ್ಟು ಕನ್ನಡದಲ್ಲಿಯೇ ಬೋರ್ಡ್ ಇರಬೇಕು. 2024ರ ಫೆಬ್ರುವರಿ 28ರೊಳಗೆ ಅಂಗಡಿಗಳ ಬೋರ್ಡ್ ಚೇಂಜ್ ಮಾಡಬೇಕು. ಜಾಹೀರಾತುಗಳಲ್ಲೂ ಸರ್ಕಾರದ ನಿಯಮ ಪಾಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕನ್ನಡ ನಾಮಫಲಕ ಅಳವಡಿಸುವ ಸಂಬಂಧ ಪ್ರತಿಭಟನೆ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಬಂಧನದ ಬೆನ್ನಲ್ಲೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ದಿಢೀರ್ ಹಿರಿಯ ಅಧಿಕಾರಿಗಳ ಜೊತೆ ಸಭೆ ಮಾಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಫಲಕಗಳು ಶೇಕಡಾ 50ರಷ್ಟು ಕನ್ನಡದಲ್ಲೇ ಇರಬೇಕು. ಬಾಕಿ ಅರ್ಧದಷ್ಟು ಬೇರೆ ಭಾಷೆಯಲ್ಲಿಯರಬೇಕು. ಈ ಬಗ್ಗೆ 2018ರಲ್ಲಿಯೇ ಕಾನೂನು ಮಾಡಿ ಸುತ್ತೋಲೆ ಹೊರಡಿಸಲಾಗಿದೆ. ಆದ್ರೆ, ಇದೀಗ ಶೇ.60ರಷ್ಟು ಕನ್ನಡದಲ್ಲಿಯೇ ಬೋರ್ಡ್ ಇರಬೇಕು. ಹಿಂದಿನ ಸುತ್ತೋಲೆಯಲ್ಲಿ ಶೇ.50ರಷ್ಟು ಎಂದು ಆಗಿತ್ತು. ಹಾಗಾಗಿ ಅದಕ್ಕೆ ತಿದ್ದುಪಡಿ ತರುವುದಕ್ಕೆ ಇಂದಿನ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಹಾಗಾಗಿ 2024ರ ಫೆ.28ರೊಳಗೆ ಬೋರ್ಡ್ ಚೇಂಜ್ ಮಾಡಬೇಕು. ಜಾಹೀರಾತುಗಳಲ್ಲೂ ಸರ್ಕಾರದ ನಿಯಮ ಪಾಲಿಸಬೇಕು. ನಿಯಮ ಜಾರಿಗೆ ವಿಳಂಬ ಆಗಿರುವುದು ನಿಜ . ಆದ್ರೆ, ಇನ್ಮುಂದೆ ವಿಳಂಬ ಮಾಡದಂತೆ ಕ್ರಮ ವಹಿಸಲಾಗುತ್ತೆ ಎಂದು ಹೇಳಿದರು.
ಪ್ರತಿಭಟನೆ ಇದ್ರೆ ಫ್ರೀಡಂಪಾರ್ಕ್ ನಲ್ಲಿ ಮಾಡಬೇಕು. ಹೈಕೋರ್ಟ್ ಈ ಕುರಿತು ಆದೇಶವನ್ನೇ ಹೊರಡಿಸಿದೆ. ಶಾಂತಿಯುತ ಪ್ರತಿಭಟನೆ ಮಾಡಿದ್ರೆ ವಿರೋಧಿಸುವುದಿಲ್ಲ. ಯಾರೇ ಆದ್ರೂ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ನಾನು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ಯಾರೂ ಕೂಡ ಕಾನೂನು ಕೈಗೆತೆಗೆದುಕೊಳ್ಳಬಾರದು. ಎಲ್ಲ ಸಂಘಟನೆ, ಹೋರಾಟಗಾರರಿಗೆ ನನ್ನ ಮನವಿ. ಶಾಂತಿಯುತವಾಗಿ ನಿಮ್ಮ ಪ್ರತಿಭಟನೆಗಳನ್ನ ಮಾಡಿ. ಕರ್ನಾಟಕದಲ್ಲಿ ಕನ್ನಡ ಸಾರ್ವಭೌಮ ಭಾಷೆ. ಇದರಲ್ಲಿ ಯಾವುದೇ ರೀತಿ ರಾಜಿ ಇಲ್ಲ. ಶಾಂತಿಯುತ ಪ್ರತಿಭಟನೆಗೆ ನಾವು ಅಡ್ಡಿಪಡಿಸುವುದಿಲ್ಲ. ಆದ್ರೆ, ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ್ರೆ ಸಹಿಸಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮ ಫಿಕ್ಸ್ ಎಂದು ಎಚ್ಚರಿಕೆ ನೀಡಿದರು.
ಇನ್ನು ಇದೇ ವೇಳೆ ನಾಪಫಲಕ ಬಗ್ಗೆ ಕರವೇ ಪ್ರತಿಭಟನೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಕರವೇಯವರು ಮನವಿ ಕೊಟ್ಟಿದ್ರೆ ಪೊಲೀಸರು ಉತ್ತರಿಸುತ್ತಿದ್ದರು. ನನಗೂ ಬಂದಿಲ್ಲ, ಗೃಹ ಸಚಿವರಿಗೂ ಮನವಿ ಬಂದಿಲ್ಲ. ಯಾವುದೇ ಮನವಿ ಕೊಡದೇ ಪ್ರತಿಭಟನೆ ಮಾಡಿದ್ದಾರೆ. ನಾವು ಯಾವಾಗಲೂ ಕನ್ನಡ ಪರ ಎಂದು ಸ್ಪಷ್ಟಪಡಿಸಿದರು.
ಕನ್ನಡ ಸಾರ್ವಭೌಮ ಭಾಷೆ, ಎರಡು ಮಾತಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕನ್ನಡ ಭಾಷೆ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಸರ್ಕಾರದ ನಿಯಮ ಪಾಲಿಸದಿದ್ರೆ ಕಾನೂನು ಕ್ರಮ. ಇದು ಇಡೀ ಕರ್ನಾಜ್ಯಕ್ಕೇ ಅನ್ವಯಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪುನರುಚ್ಚರಿಸಿದರು.