ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮ
ಕೆ. ಆರ್.ನಗರ: ದೇಶದ ಬೆನ್ನೆಲುಬು ಎನ್ನುವ ರೈತರು ಆರ್ಥಿಕವಾಗಿ ಅಭಿವೃದ್ದಿಗೊಂಡಾಗ ಮಾತ್ರ ಆ ದೇಶ ಸರ್ವಾಂಗೀಣವಾಗಿ ಮುಂದುವರೆಯಲು ಸಾಧ್ಯ ಇದನ್ನು ಅರಿತ ನಮ್ಮ ಸರ್ಕಾರ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಕೆ.ಆರ್.ನಗರ ಪಟ್ಟಣದ ಶ್ರೀ ಕೃಷ್ಣಮಂದಿರದಲ್ಲಿ ತಾಲೂಕು ಕೃಷಿಕ ಸಮಾಜ, ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ, ನಾಗನಹಳ್ಳಿ ಕೃಷಿ ಸಂಶೋಧನಾ ಕೇಂದ್ರ ಮತ್ತು ತಾಲೂಕು ಯುವ ರೈತ ವೇದಿಕೆ ವತಿಯಿಂದ ನಡೆದ ರಾಷ್ಟ್ರೀಯ ರೈತ ದಿನಾಚರಣೆ ಮತ್ತು ತಾಲೂಕು ಮಟ್ಟದ ಕಿಸಾನ್ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತ ಕೃಷಿ ಪ್ರಧಾನ ರಾಷ್ಟವಾಗಿದ್ದು ಇತ್ತಿಚಿನ ದಿನಗಳಲ್ಲಿ ನಮ್ಮ ದೇಶದ ರೈತರು ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡುತ್ತಿದ್ದಾರೆ ಇದರಿಂದ ಜಗತ್ತಿಗೆ ಮಾದರಿಯಾಗಿದ್ದೇವೆ ಇಂತಹಾ ರೈತರಿಗೆ ಬೇಕಾಗಿರುವ ನೀರು, ವಿದ್ಯುತ್ ಮತ್ತು ಅವರುಗಳು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ನಮ್ಮ ಸರ್ಕಾರ ಬದ್ದವಾಗಿದೆ ಎಂದರು.
ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಅವರ ಸಮಸ್ಯೆಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಅವುಗಳ ಪರಿಹಾರಕ್ಕೆ ಬದ್ದನಾಗಿ ಕೆಲಸ ಮಾಡಲು ನಿರ್ಧರಿಸಲಾಗಿದ್ದು ಇದರ ಜತೆಗೆ ಸಾಲಿಗ್ರಾಮ ತಾಲೂಕು ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್ ನವರು ಟೆಂಡರ್ ನೊಂದಣಿ ಮಾಡಿಸುವಂತೆ ಸಕ್ಕರೆ ಸಚಿವರಿಗೆ ಸದನದಲ್ಲೇ ಒತ್ತಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳನ್ನು ಬರ ಪೀಡಿತ ಪ್ರದೇಶದ ಪಟ್ಟಿಗೆ ಸೇರಿಸಲಾಗಿದ್ದು ಈ ಭಾಗದ ರೈತರು ಯಾವುದೇ ಆತಂಕಕ್ಕೆ ಒಳಗಾಗಬಾರದು ಸರ್ಕಾರದಿಂದ ಪರಿಹಾರ ಸೇರಿದಂತೆ ಎಲ್ಲಾ ರೀತಿಯ ಸವಲತ್ತುಗಳನ್ನು ಕೊಡಿಸಲಾಗುತ್ತದೆ ಎಂದು ಭರವಸೆ ನೀಡಿದ ಶಾಸಕರು ಇದಕ್ಕೆ ಸಂಬಂಧ ಪಟ್ಟ ಎಫ್‌ಐಡಿಯನ್ನು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ನೊಂದಣಿ ಮಾಡಿಸಬೇಕು ಎಂದು ಮನವಿ ಮಾಡಿದರು.
ಹಿರಿಯ ಪತ್ರಕರ್ತ ಅಂಶಿಪ್ರಸನ್ನಕುಮಾರ್ ಮಾತನಾಡಿ ರೈತರು ಏಕ ಬೆಳೆ ಬೆಳೆಯುವುದನ್ನು ಕೈಬಿಟ್ಟು ಮಿಶ್ರ ಬೇಸಾಯಕ್ಕೆ ಆದ್ಯತೆ ನೀಡಬೇಕು ಆಗ ಮಾತ್ರ ತಾವು ಆರ್ಥಿಕವಾಗಿ ಸದೃಡರಾಗಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದ ಅವರು ರೈತರು ಮತ್ತು ಸೈನಿಕರು ದೇಶದ ಎರಡು ಕಣ್ಣುಗಳಾಗಿದ್ದು ಇವರುಗಳಿಗೆ ಸರ್ಕಾರಗಳು ಅವರಿಗೆ ಬೇಕಾಗುವ ಸವಲತ್ತುಗಳನ್ನು ಸಕಾಲದಲ್ಲಿ ಒದಗಿಸಬೇಕು ಎಂದು ಕೋರಿದರು.
ಕರೋನಾ ಸಂದರ್ಭದಲ್ಲಿ ದೇಶ ಲಾಕ್‌ಡೌನ್ ಆದಾಗಲೂ ರೈತ ಸಮುದಾಯ ಕೃಷಿ ಚಟುವಟಿಕೆಯನ್ನು ಮಾಡಿ ದೇಶಕ್ಕೆ ಆಹಾರ ನೀಡುವುದರ ಮೂಲಕ ನಾವುಗಳು ಬೇರೆಯವರ ಮುಂದೆ ಕೈಚಾಚದಂತೆ ನೋಡಿಕೊಂಡಿದ್ದಾರೆ ಇಂತಹಾ ರೈತ ಸಮುದಾಯಕ್ಕೆ ಎಲ್ಲರೂ ಅಭಾರಿಯಾಗಬೇಕು ಎಂದು ಹೇಳಿದರು.
ಪ್ರಗತಿ ಪರ ರೈತರಾದ ಅರ್ಜುನಹಳ್ಳಿ ಕವಿತಾ, ಅರಸನಕೊಪ್ಪಲು ತಮ್ಮಯ್ಯ, ಕೆ.ಆರ್.ನಗರದ ಕುಮಾರ್, ಮತ್ತು ಸಮಾಜ ಸೇವಕ ಕೆ.ಎಲ್.ಹೇಮಂತ್‌ರವರನ್ನು ಸನ್ಮಾನಿಸಲಾಯಿತು.
ಯುವ ರೈತ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿರಾಂಪ್ರಸಾದ್, ಕೃಷಿಕ ಸಮಾಜದ ಅಧ್ಯಕ್ಷ ಎಸ್.ಡಿ.ದಿವಾಕರ್, ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪನಿರ್ದೇಶ ಡಾ.ಮಂಜುನಾಥ್‌ಅಂಗಡಿ, ಸಸ್ಯ ಸಂರಕ್ಷಣೆ ವಿಸ್ತರಣಾ ಸಹಾಯಕ ಪ್ರಾಧ್ಯಾಪಕರಾದ ಡಾ.ಆರ್.ಎನ್.ಪುಷ್ಪ ಮಾತನಾಡಿದರು.
ರೈತ ಸಂಘದ ಹಿರಿಯ ಮುಖಂಡ ಗರುಡಗಂಭಸ್ವಾಮಿ, ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಭಾರತಿ ಸೇರಿದಂತೆ ರೈತ ಸಂಘದ ಮುಖಂಡರುಗಳು ಮತ್ತು ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಹಾಜರಿದ್ದರು.