Sunday, April 20, 2025
Google search engine

Homeಅಪರಾಧಡೆತ್‌ನೋಟ್ ಬರೆದಿಟ್ಟು ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯಲ್ಲಿ ಅಸ್ತಿಪಂಜರಗಳ ಪತ್ತೆ

ಡೆತ್‌ನೋಟ್ ಬರೆದಿಟ್ಟು ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯಲ್ಲಿ ಅಸ್ತಿಪಂಜರಗಳ ಪತ್ತೆ

ಚಿತ್ರದುರ್ಗ: ಡೆತ್‌ನೋಟ್ ಬರೆದಿಟ್ಟು ಒಂದೇ ಕುಟುಂಬದ ಐವರು ೪ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಇಲ್ಲಿನ ಚಳ್ಳಕೆರೆ ಗೇಟ್ ಸಮೀಪವಿರುವ ಜೈಲ್ ರಸ್ತೆಯಲ್ಲಿನ ಮನೆಯೊಂದರಲ್ಲಿ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಐದು ಜನರ ಅಸ್ತಿಪಂಜರಗಳು ಪತ್ತೆಯಾಗಿವೆ. ಈ ಬಗ್ಗೆ ಮೃತರ ಸಂಬಂಧಿ ಪವನ್ ಕುಮಾರ್ ಎಂಬವರು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಘಟನೆಯಿಂದ ಸ್ಥಳೀಯರು ಬೆಚ್ಚಿ ಬಿದ್ದಿದ್ದು, ಜನ ಭೀತಿಗೆ ಒಳಗಾಗಿದ್ದಾರೆ.

ಚಿತ್ರದುರ್ಗದ ದೊಡ್ಡ ಸಿದ್ದವ್ವನಹಳ್ಳಿಯ ಜಗನ್ನಾಥ್ ರೆಡ್ಡಿ(೭೦) ಎಂಬವರಿಗೆ ಸೇರಿದ ಮನೆಯಾಗಿದ್ದು, ಇವರು ಪಿಡಬ್ಲ್ಯುಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿದ್ದು ನಿವೃತ್ತರಾಗಿದ್ದರು. ಮನೆಯಲ್ಲಿ ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಾವತಿ(೬೦) ಪುತ್ರಿ ತ್ರಿವೇಣಿ (೪೨), ಪುತ್ರರಾದ ಕೃಷ್ಣರೆಡ್ಡಿ(೪೦), ಹಾಗೂ ನರೇಂದ್ರ ರೆಡ್ಡಿ(೩೮) ವಾಸವಾಗಿದ್ದರು. ಆದರೆ, ಸುಮಾರು ವರ್ಷಗಳಿಂದ ಜಗನ್ನಾಥ ರೆಡ್ಡಿ ಅವರ ಕುಟುಂಬ ನಮ್ಮ ಸಂಪರ್ಕದಲ್ಲಿ ಇರಲಿಲ್ಲ. ನಮ್ಮ ಮನೆಗೆ ಅವರು ಬರುತ್ತಿರಲಿಲ್ಲ, ನಾವು ಅವರ ಮನೆಗೆ ಹೋಗುತ್ತಿರಲಿಲ್ಲ. ಕೆಲವು ವರ್ಷಗಳಿಂದ ಈ ಕುಟುಂಬ ಎಲ್ಲಿಯೂ ಕಂಡಿಲ್ಲ’ ಎಂದು ಪವನ್ ಕುಮಾರ್ ತಿಳಿಸಿದ್ದಾರೆ.

ಇವೆಲ್ಲವೂ ಒಂದೇ ಕುಟುಂಬಸ್ಥರ ಶವಗಳು ಎಂದು ಹೇಳಲಾಗುತ್ತಿದ್ದು, ಸುಮಾರು ೪ ವರ್ಷಗಳ ಹಿಂದೆಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಕುಟುಂಬಸ್ಥರಿಗೆ ಗಂಭೀರ ಆರೋಗ್ಯ ಸಮಸ್ಯೆ ಇತ್ತು ಎಂದು ಹೇಳಲಾಗುತ್ತಿದ್ದರೂ ಡೆತ್‌ನೋಟ್ ಬರೆದಿರುವ ಕಾರಣ ಸಾವಿಗೆ ಕಾರಣ ಇನ್ನೂ ಸಮರ್ಪಕವಾಗಿ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಜಗನ್ನಾಥರೆಡ್ಡಿ ಪುತ್ರ ನರೇಂದ್ರರೆಡ್ಡಿ ೨೦೧೩ರಲ್ಲಿ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದನು. ಈತ ತನ್ನ ಗೆಳೆಯರ ಜತೆ ಸೇರಿ ಬಿಡದಿ ಬಳಿ ವಾಹನವೊಂದನ್ನು ತಡೆದು ದರೋಡೆ ಮಾಡಿದ್ದ ಪ್ರಕರಣದಲ್ಲಿ ಭಾಗಿಯಾಗಿದ್ದನು. ಈ ಆರೋಪದಡಿ ಕೆಲ ದಿನಗಳ ಕಾಲ ಜೈಲಿನಲ್ಲಿದ್ದನು. ನರೇಂದ್ರರೆಡ್ಡಿಯ ಈ ಕೃತ್ಯದಿಂದ ಮನನೊಂದ ಕುಟುಂಬ, ಡೆತ್ ನೋಟ್ ಬರೆದಿಟ್ಟು ೨೦೧೯ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದೆ. ಈ ಎಲ್ಲ ವಿಷಯ ಡೆತ್ ನೋಟ್‌ನಲ್ಲಿದೆ ಎಂದು ಹೇಳಲಾಗುತ್ತಿದೆ.

ಮತ್ತೊಂದು ಮೂಲದ ಪ್ರಕಾರ ಜಗನ್ನಾಥ ರೆಡ್ಡಿಯವರ ಪತ್ನಿ ಅಸ್ವಸ್ಥರಾಗಿದ್ದು, ೨ ಕೋಟಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗಿರಲಿಲ್ಲ. ಈ ಮನೆಯವರು ಯಾರನ್ನೂ ಒಳಬಿಟ್ಟುಕೊಳ್ಳುತ್ತಿರಲಿಲ್ಲ. ಬಾಗಿಲು ತೆರೆಯದೇ ಕಿಟಕಿಯಿಂದ ಮಾತಾಡಿಸಿ ಕಳುಹಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ೨೦೨೨ರ ಬಳಿಕ ಈ ಮನೆಯವರು ಯಾರಿಗೂ ಕಾಣಿಸಿಕೊಂಡಿಲ್ಲ. ಮನೆಯಲ್ಲಿ ಆಕ್ಸಿಜನ್ ಸಿಲಿಂಡರ್ ಕೂಡ ಕಂಡುಬಂದಿದೆ. ಆದರೆ ಈ ಪ್ರಕರಣ ಹೆಚ್ಚಿನ ಕುತೂಹಲ ಗರಿಗೆದರಿಸುವಂತಿದೆ. ಸಿಕ್ಕ ಅಸ್ಥಿಪಂಜರಗಳು ಯಾರದು? ಮನೆಯಲ್ಲಿದ್ದವರು ೪ ಜನ ಐದು ಅಸ್ತಿಪಂಜರಗಳು ಪತ್ತೆಯಾಗಿವೆ. ಮತ್ತೊಂದು ಯಾರದ್ದು? ಅಥವಾ ಅಸ್ತಿಪಂಜರಗಳು ೪ ಜನರದ್ದಾ ? ಎಲ್ಲರೂ ಏಕಕಾಲಕ್ಕೆ ಸತ್ತರೇ? ಸಾವಿಗೆ ಆತ್ಮಹತ್ಯೆ ಕಾರಣವೇ? ಕಾಯಿಲೆ ಅಥವಾ ಅನ್ಯ ಕಾರಣಗಳಿದ್ದಿರಬಹುದೇ? ನಾಲ್ಕು ವರ್ಷಗಳಾದರೂ ಈ ಸಾವುಗಳು ಯಾರ ಗಮನಕ್ಕೂ ಬರದೇ ಇದ್ದುದು ಹೇಗೆ? ಎಂಬ ಪ್ರಶ್ನೆಗಳು ಮೂಡತೊಡಗಿದ್ದು, ಈ ಕುರಿತು ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಘಟನೆ ಕುರಿತು ಗೃಹಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಮನೆಯಲ್ಲಿ ಅಸ್ಥಿಪಂಜರಗಳು ಸಿಕ್ಕ ಕುರಿತು ತನಿಖೆ ನಂತರ ತೀರ್ಮಾನ ತೆಗೆದುಕೊಳ್ಳುತ್ತೇವೆ. ಸದ್ಯ ಅಸ್ಥಿಪಂಜರ ಸಿಕ್ಕಿರುವ ಮಾಹಿತಿ ಅಷ್ಟೇ ಇದೆ. ಕೊರೊನಾದಿಂದ ಸತ್ತಿದ್ದಾರಾ ಎಂದು ತನಿಖೆ ಮಾಡುತ್ತೇವೆ ಎಂದು ಹೇಳಿದರು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಐಜಿಪಿ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‌ಪಿ ಅನಿಲ್ ಕುಮಾರ್, ಸಿಪಿಐ ನಯಿಂ ಸೇರಿದಂತೆ ಬಡಾವಣೆ ಠಾಣೆ ಪೊಲೀಸರು ರಾತ್ರಿ ೧ ಗಂಟೆಯವರೆಗೆ ಇದ್ದು ಮಾಹಿತಿ ಸಂಗ್ರಹ ಮಾಡಿದರು.

ವಿದ್ಯುತ್ ಬಿಲ್ ಪಾವತಿ: ೨೦೧೯ರ ಜನವರಿಯಲ್ಲಿ ಕೊನೆಯದಾಗಿ ವಿದ್ಯುತ್ ಬಿಲ್ ಪಾವತಿಸಲಾಗಿದೆ. ಈವರೆಗೆ ೨,೮೫೦ ರೂ. ಕರೆಂಟ್ ಬಿಲ್ ಬಾಕಿ ಉಳಿದಿದೆ. ನಿವೃತ್ತ ಇಂಜಿನಿಯರ್ ಪಿಂಚಣಿಗಾಗಿ ಪ್ರತಿವರ್ಷ ಅರ್ಜಿ ಸಲ್ಲಿಸುತ್ತಿದ್ದರು. ಇನ್ನು ಕುಟುಂಬ ಚಿನ್ನ ಅಡವಿಟ್ಟು ಸಾಲ ಪಡೆದಿರುವ ಮಾಹಿತಿ ಪೊಲೀಸರಿಗೆ ದೊರೆತಿದೆ. ಒಟ್ಟಾರೆಯಾಗಿ ಪೊಲೀಸರು ಎಲ್ಲ ಆಯಾಮದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪ್ರತಿ ಕೋಣೆಯಲ್ಲೂ ಅಸ್ತಿ ಪಂಜರ : ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವಗಳಿವೆ ಎಂಬ ಸುದ್ದಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿ ಮನೆಯ ಬಾಗಿಲು ತೆರೆದಾಗ ಮನೆಯ ಪ್ರತಿ ಕೋಣೆಯಲ್ಲೂ ಮೃತಪಟ್ಟ ವ್ಯಕ್ತಿಗಳ ಅಸ್ಥಿಪಂಜರಗಳು ಕಂಡುಬಂದಿವೆ.
ತಲೆ ಬುರುಡೆ ಪತ್ತೆ: ರಾತ್ರಿ ೧೧ ಗಂಟೆ ವೇಳೆಗೆ ದಾವಣಗೆರೆಯಿಂದ ವಿಧಿ ವಿಜ್ಞಾನ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸುವಾಗ ತಲೆಯ ಬುರುಡೆಗಳು ಪತ್ತೆಯಾಗಿವೆ. ಮನೆಯಲ್ಲಿ ಮೃತಪಟ್ಟಿರುವವರ ಸಂಖ್ಯೆ ನಾಲ್ಕು ಅಥವಾ ಐದು ಜನ ಎಂಬುದನ್ನು ಪೊಲೀಸರು ಅಧಿಕೃತವಾಗಿ ಖಚಿತಪಡಿಸಬೇಕಿದೆ.
ಹಿರಿಯ ಮಗ ಮೃತರಾಗಿದ್ದರು: ಜಗನ್ನಾಥ ರೆಡ್ಡಿ ಅವರಿಗೆ ಮೂವರು ಗಂಡು ಮಕ್ಕಳು, ಒಬ್ಬ ಪುತ್ರಿ ಇದ್ದರು. ಯಾರಿಗೂ ಮದುವೆ ಆಗಿರಲಿಲ್ಲ ಎನ್ನಲಾಗಿದೆ. ಹಿರಿಯ ಮಗ ಮಂಜುನಾಥ ರೆಡ್ಡಿ ಎಂಬುವವರು ಈ ಹಿಂದೆಯೇ ಮೃತಪಟ್ಟಿದ್ದರು ಎನ್ನುತ್ತಾರೆ ಸಂಬಂಧಿಕರು.

`೨೦೧೯ರಲ್ಲಿ ಮನೆಯಿಂದ ವಾಸನೆ ಬರುತ್ತಿತ್ತು. ಆಗ ಇಲಿ ಸತ್ತಿರಬಹುದು ಎಂದು ಭಾವಿಸಲಾಗಿತ್ತು. ಕೆಲ ದಿನ ವಾಸನೆ ಬಂದು ನಿಂತಿತ್ತು. ಆನಂತರ ಯಾರೂ ಆ ಮನೆಯ ಕಡೆಗೆ ಗಮನ ಹರಿಸಿರಲಿಲ್ಲ’ ಎನ್ನುತ್ತಾರೆ ಸ್ಥಳೀಯರು.

RELATED ARTICLES
- Advertisment -
Google search engine

Most Popular