ಮೈಸೂರು: ರಸ ಋಷಿ, ವಿಶ್ವ ಕವಿ ಕುವೆಂಪು ಅವರು ಪ್ರತಿಷ್ಠಿತ ಮೈಸೂರಿನ ಹಾರ್ಡ್ವಿಕ್ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಅವರೊಳಗಿನ ಕಾವ್ಯ ಪ್ರತಿಭೆ ಆಗಲೇ ಅರಳಲು ಪ್ರಾರಂಭಿಸಿ ಮಹಾ ಕವಿಯ ಮಹಾ ಕಾವ್ಯ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದು ಈ ದಿಶೆಯಲ್ಲಿ ಹಾರ್ಡ್ವಿಕ್ ಶಿಕ್ಷಣ ಸಂಸ್ಥೆಗೊಂದು ಚಾರಿತ್ರಿಕ ಮಹತ್ವವಿದೆಯೆಂದು ಪತ್ರಕರ್ತರೂ ಆದ ಸಾಹಿತಿ ಬನ್ನೂರು ಕೆ.ರಾಜು ತಿಳಿಸಿದರು.
ನಗರದ ಝಾನ್ಸಿರಾಣಿ ಲಕ್ಷ್ಮೀ ಬಾಯಿ ರಸ್ತೆಯಲ್ಲಿರುವ ಹಾರ್ಡ್ವಿಕ್ ಪ್ರೌಢಶಾಲೆ ಮತ್ತು ಹಿರಣ್ಮಯಿ ಪ್ರತಿಷ್ಠಾನ ಹಾಗೂ ಕಾವೇರಿ ಬಳಗ ಸಂಯುಕ್ತವಾಗಿ ಶಾಲಾ ಆವರಣದಲ್ಲಿ ವಿಶ್ವಕವಿ ಕುವೆಂಪು ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ‘ವಿಶ್ವಮಾನವ ದಿನಾಚರಣೆ’ ಕಾರ್ಯಕ್ರಮವನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
“ಕನ್ನಡ ಮಂತ್ರ ಕಣಾ, ಶಕ್ತಿ ಕಣಾ…” ಎನ್ನುತ್ತಲೇ ಕನ್ನಡ ಡಿಂಡಿಮ ಬಾರಿಸುತ್ತಾ ತಮ್ಮ ಲೇಖನಿ ಮಾತ್ರದಿಂದಲೇ ಕನ್ನಡವನ್ನು ವಿಶ್ವದೆತ್ತರಕ್ಕೂ ಕೊಂಡೊಯ್ದ ಸಾಹಿತ್ಯಲೋಕದ ಮೇರುಶಿಖರ ಕುವೆಂಪು ಅವರೆಂದರು.
ನಮ್ಮ ಕನ್ನಡದ ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೇವಲಂ’ ಎಂಬುದನ್ನು ಕುವೆಂಪು ಅವರು ತಮ್ಮ ಬದುಕು ಮತ್ತು ಬರಹದ ಧ್ಯೇಯ ವಾಕ್ಯ ಮಾಡಿಕೊಂಡು ಕನ್ನಡವನ್ನು ಕಟ್ಟಿದವರು. ಅಷ್ಟು ಮಾತ್ರವಲ್ಲ, ಎಲ್ಲಾ ದೇಶಗಳಲ್ಲಿ ಮತ್ತು ಎಲ್ಲಾ ಮತಗಳಲ್ಲಿರುವ ಜಾತಿ ಪದ್ಧತಿಯನ್ನು ಸಂಪೂರ್ಣವಾಗಿ ನಿರಾಕರಿಸಿ ವಿನಾಶಗೊಳಿಸಬೇಕು.ಮತ ಮನುಜ ಮತವಾಗಬೇಕು ಪಥ ವಿಶ್ವಪಥವಾಗಬೇಕು ಎಂದು ಜಗತ್ತಿಗೆ ವಿಶ್ವಮಾನವ ಸಂದೇಶ ನೀಡಿದ ಪ್ರಪಂಚದ ಪ್ರಪ್ರಥಮ ಮಹಾಕವಿ ಕುವೆಂಪು ಎಂದ ಅವರು,ಇಂತಹ ಜಗದ ಕವಿಯ, ಯುಗದ ಕವಿಯ ಜನ್ಮದಿನವನ್ನು ವಿಶ್ವಮಾನವ ದಿನಾಚರಣೆಯನ್ನಾಗಿ ನಾಡು ಆಚರಿಸುತ್ತಿರುವುದು ಇಡೀ ಜಗತ್ತೇ ಮೆಚ್ಚುವಂಥದ್ದೆಂದು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗು ಸಾಹಿತಿ ಡಾ.ಬಿ.ಸಿ. ವಿಜಯ ಕುಮಾರ್ ಮಾತನಾಡಿ, ಇವತ್ತೇನಾದರು ನಮ್ಮ ಕನ್ನಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಷ್ಟೊಂದು ಸಾಧನೆ ಮಾಡಿ ಜಾಗತಿಕವಾಗಿ ಗಮನ ಸೆಳೆದಿದೆ ಎಂದರೆ ಕನ್ನಡ ನಾಡಿನ ಇಬ್ಬರು ಮಹಾತ್ಮರು ಪ್ರಮುಖ ಕಾರಣರು. ಅವರಲ್ಲಿ ಒಬ್ಬರು ಚಲನ ಚಿತ್ರ ಜಗತ್ತಿನ ಮೇರು ನಟ ಡಾ.ರಾಜ್ ಕುಮಾರ್ ಮತ್ತೊಬ್ಬರು ರಾಷ್ಟ್ರ ಕವಿ ಕುವೆಂಪು ಅವರೆಂದು ಹೇಳಿ ಅವರ ಬದುಕ-ಬರಹ, ಸಾಧನೆ-ಸಿದ್ಧಿಯ ಬಗ್ಗೆ ಸವಿವರ ವಾಗಿ ತಿಳಿಸಿಕೊಟ್ಟರು.
ಪ್ರತಿಷ್ಠಾನದ ಅಧ್ಯಕ್ಷರಾದ ವಿಶ್ರಾಂತ ಶಿಕ್ಷಕ ಎ. ಸಂಗಪ್ಪ ಅವರು, ಪ್ರಾಸ್ತಾವಿಕ ನುಡಿಗಳ ನ್ನಾಡಿ ಎಲ್ಲರನ್ನೂ ಸ್ವಾಗತಿಸಿದರಲ್ಲದೆ ಕಾರ್ಯಕ್ರಮ ದ ಸದುದ್ದೇಶದ ಬಗ್ಗೆ ತಿಳಿಸಿ ಕೊಟ್ಟರು. ಕುವೆಂಪು ಸ್ಮರಣೆಯಲ್ಲಿ ಮಕ್ಕಳ ಶಿಕ್ಷಣಕ್ಕೆ ಪೂರಕವಾದ ವಿವಿಧ ಸ್ಪರ್ಧೆಗಳನ್ನು ನಡೆಸಿ ವಿಜೇತ ವಿದ್ಯಾರ್ಥಿಗಳಾದ ಭಾಷಣ ಸ್ಪರ್ಧೆಯಲ್ಲಿ 10ನೇ ತರಗತಿಯ ಹರ್ಷ (ಪ್ರ), ಬಿಂದುಶ್ರೀ(ದ್ವಿ) ಮತ್ತು ಗೀತ ಗಾಯನ ಸ್ಪರ್ಧೆಯಲ್ಲಿ ಸುರೇಶ್ ರಾವ್ (ಪ್ರ),ಕುಸುಮಾ(ದ್ವಿ) ಹಾಗೂ ಗೀತ ಗಾಯನ ಸ್ಪರ್ಧೆಯಲ್ಲಿ 9ನೇ ತರಗತಿಯ ರಕ್ಷಾ(ಪ್ರ), ಶಿವರಾಜ್ (ದ್ವಿ) ಅವರುಗಳಿಗೆ ಕಲಾವಿದೆ ಹಾಗೂ ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಅವರು ಬಹುಮಾನ ನೀಡಿ ಅಭಿನಂದಿಸಿದರು. ಕವಯಿತ್ರಿ ಮತ್ತು ಗಾಯಕಿ ರೋಹಿಣಿ ಶೇಖರ್ ಅವರು ಕುವೆಂಪು ರಚಿತ ಕನ್ನಡ ಗೀತಾಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಜಮುನಾರಾಣಿ ಮಿರ್ಲೆ,ಮುಕ್ತಕ ಕವಿ ಎಂ.ಮುತ್ತುಸ್ವಾಮಿ ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ನಿರ್ದೇಶಕ ಚಂದ್ರೇಗೌಡ ಶಿಕ್ಷಕರಾದ ಸಿ.ಷಣ್ಮಖ, ಕೃಷ್ಣನಾಯಕ್, ರಮ್ಯಾ, ಪುಷ್ಪಲತಾ, ಅಕ್ಕಮಹಾದೇವಿ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ಹಿರಿಯ ಶಿಕ್ಷಕಿ ಜೆ.ಸಬೀನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಸಿಹಿ ವಿತರಿಸಿ ವಿಶ್ವಮಾನವ ದಿನಾಚಣೆಯ ಶುಭಾಶಯ ಕೋರಲಾಯಿತು.