ಸಾಲಿಗ್ರಾಮ: ಕುವೆಂಪು ಅವರು ಕನ್ನಡದ ಸಾಂಸ್ಕೃತಿಕ ಲೋಕದ ರಾಯಭಾರಿಗಳು ಎಂದು ಮಿಥಿಲಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಕೆ.ಜಯರಾಮ್ ಹೇಳಿದರು. ಅವರು ತಾಲೂಕಿನ ಮಿರ್ಲೆ ಗ್ರಾಮದ ಮಿಥಿಲಾ ವಿದ್ಯಾಸಂಸ್ಥೆಯಲ್ಲಿ ೨೦೨೪ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ಡಾ.ಕುವೆಂಪು ಅವರ ಜನ್ಮ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕುವೆಂಪು ಅವರು ಕವಿಗಳು, ನಾಟಕಕಾರರು, ಕಾದಂಬರಿಕಾರರು, ವಿಮರ್ಶಕರು, ಚಿಂತಕರಾಗಿ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ. ಇಂತಹ ಮಹನೀಯರು ಹಾಕಿಕೊಟ್ಟಿರುವ ಸನ್ಮಾರ್ಗದಲ್ಲಿ ಎಲ್ಲರೂ ನಡೆಯಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಶಿಕ್ಷಕರುಗಳಿಗೆ ವಿವಿಧ ವಿಷಯ ಕುರಿತು ಭಾಷಣ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕುವೆಂಪು ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ವಿದ್ಯಾ ಸಂಸ್ಥೆಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಎಂ.ಬಿ.ಲೋಕನಾಥ, ರೈತ ಸಂಘಟನೆಯ ಯುವ ಮುಖಂಡ ರಾಮ್ ಪ್ರಸಾದ್, ಮುಖ್ಯ ಶಿಕ್ಷಕರಾದ ಎಂ.ಆರ್.ಜಯರತ್ನ, ಎಲ್.ಸೀಮಾ, ಮಂಜುನಾಥ್ ಕಮತಳ್ಳಿ, ಎಂ.ಎಸ್.ಅರ್ಪಿತ, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.