ಯಳಂದೂರು : ಕುವೆಂಪು ಸಮ ಸಮಾಜ ನಿರ್ಮಿಸಲು ತಮ್ಮ ಇಡೀ ಜೀವನ ಮುಡಿಪಾಗಿಟ್ಟ ಬರೆದಂತೆ ನಡೆದ, ನಡೆದಂತೆ ಬರೆದ ದೇಶಕಂಡ ಮಹಾನ್ ಮಾನವತಾವಾದಿ ಎಂದು ಸಾಹಿತಿ, ಶಿಕ್ಷಕ ಮದ್ದೂರು ದೊರೆಸ್ವಾಮಿ ಅಭಿಪ್ರಾಯಪಟ್ಟರು. ಅವರು ತಾಲೂಕಿನ ಹೊನ್ನೂರು ಗ್ರಾಮದಲ್ಲಿ ಡಾ.ಭೀಮ್‌ರಾವ್ ರಾಮ್‌ಜೀ ಪ್ರೌಢಶಾಲೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪ್ರತಿಧ್ವನಿ ಸಾಂಸ್ಕೃತಿಕ ಕಲಾವೇದಿಕೆ ವತಿಯಿಂದ ಆಯೋಜಿಸಲಾಗಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕುವೆಂಪು ಮನುಜಮತದ ಸಂದೇಶವಾಹಕರಾಗಿದ್ದರು, ತಮ್ಮ ಇಡೀ ಕೃತಿಗಳ ಮೂಲಕ ಶೋಷಿತ ಸಮುದಾಯದವರನ್ನೇ ನಾಯಕರಾಗಿ ರೂಪಿಸಿ, ಸುಳ್ಳನ್ನು ಸತ್ಯ ಎಂದು ನಂಬಿಸಿದ್ದ ಪ್ರಬಲ ವರ್ಗವನ್ನು ಎದುರು ಹಾಕಿಕೊಂಡರೂ ಕೂಡ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆ ಸತ್ಯದ ಅರಿವನ್ನು ಜಗಕ್ಕೆ ತೋರಿಸಿದ ಮಹಾನ್ ಸಂತರಾಗಿ ಕಾಣಿಸಿಕೊಂಡವರಾಗಿದ್ದಾರೆ.
ನಾವು ಇಂದು ಇವರು ಹಾಕಿಕೊಟ್ಟ ವಿಶ್ವಮಾನವ ಸಂದೇಶವನ್ನು ಸಾರಬೇಕಾದರೆ ಜಾತಿಮತ ಮೀರಿದ ಬದುಕು ನಡೆಸಬೇಕು, ನಮ್ಮಿಂದ ಧರ್ಮಾಂಧತೆ ದೂರವಾಗಬೇಕು, ಸ್ವಾಭಿಮಾನದಿಂದ, ಸ್ವತಂತ್ರವಾಗಿ ಬದುಕಬೇಕು, ವೈಜ್ಞಾನಿಕ, ವೈಚಾರಿಕ ಜೀವನವನ್ನು ನಡೆಸಬೇಕು ಎಂದರು.
ಅಗ್ರಮಾನ್ಯ ದೈತ್ಯ ಪ್ರತಿಭೆ : ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ ನಾಡುಕಂಡ ಶ್ರೇಷ್ಟ ದಾರ್ಶನಿಕ ಸಾಹಿತ್ಯ ಲೋಕದ ಅಗ್ರಮಾನ್ಯ ದೈತ್ಯ ಪ್ರತಿಭೆ ಕುವೆಂಪು ಆಗಿದ್ದರು. ಇವರ ಜೀವನ ಅನೇಕರಿಗೆ ಮಾರ್ಗದರ್ಶನವಾಗಿದೆ. ಮಂತ್ರಮಾಂಗಲ್ಯದ ಜನಕರಾಗಿದ್ದ ಇವರು ಇಂದಿಗೂ ಅನೇಕರಿಗೆ ಸ್ಪೂರ್ತಿಯಾಗಿದ್ದಾರೆ. ಇಂತಹ ಮಹಾನ್ ಕವಿ ನಮ್ಮ ನಾಡಿನಲ್ಲಿ ಹುಟ್ಟಿರುವುದು ನಮ್ಮೆಲ್ಲರ ಹೆಮ್ಮೆಯಾಗಿದ್ದು ಇವರ ತತ್ವಾದರ್ಶಗಳನ್ನು ಪಾಲಿಸಬೇಕು ಎಂದರು. ಈ ಶಾಲೆಯಲ್ಲಿ ಕೊಠಡಿ ಕೊರತೆ ಇದ್ದು ಎರಡು ಕೊಠಡಿಗೆ ಬೇಡಿಕೆ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ಇದಕ್ಕೆ ಅನುದಾನ ನೀಡುವ ಭರವಸೆಯನ್ನು ನೀಡಿದರು.
ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ ಪ್ರಸ್ತಾವಿಕ ನುಡಿಗಳನ್ನಾಡಿದರು. ಶಾಲೆಯ ಮುಖ್ಯ ಶಿಕ್ಷಕ ಕೆ.ಎನ್. ಪ್ರಮೋದ್ ಚಂದ್ರನ್, ಗ್ರಾಪಂ ಅಧ್ಯಕ್ಷ ಶಂಕರ್ ರೂಪೇಶ್, ಉಪಾಧ್ಯಕ್ಷ ಎಚ್.ಜಿ. ನಾಗರಾಜು, ಸದಸ್ಯ ಆರ್. ಪುಟ್ಟಬಸವಯ್ಯ, ಸಮಾಜ ಸೇವಕ ಲೋಕೇಶ್ ಸೀಗಡಿ, ಡಾ. ಸುಗಂಧರಾಜನ್, ರುದ್ರಯ್ಯ, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ತಾಪಂ ಮಾಜಿ ಅಧ್ಯಕ್ಷ ನಿರಂಜನ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ. ಚಂದ್ರು, ತೋಟೇಶ್, ಲಿಖಿತ ಪ್ರಮೋದ್, ಲಿಂಗರಾಜಮೂರ್ತಿ, ರಾಜಪ್ಪ, ಕಂದಹಳ್ಳಿ ನಂಜುಂಡಸ್ವಾಮಿ, ಸಿದ್ದಪ್ಪಸ್ವಾಮಿ, ಜೈಗುರು ಸೇರಿದಂತೆ ಅನೇಕರು ಹಾಜರಿದ್ದರು.