Saturday, April 19, 2025
Google search engine

Homeಸ್ಥಳೀಯರೈತ ವಿರೋಧಿ ಕಾಯ್ದೆಗಳ ವಾಪಸ್‌ಗೆ ಒತ್ತಾಯಿಸಿ ಪ್ರತಿಭಟನೆ

ರೈತ ವಿರೋಧಿ ಕಾಯ್ದೆಗಳ ವಾಪಸ್‌ಗೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು: ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ, ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಿ, ರೈತ ಪರ ನೀತಿಗಳನ್ನು ರೂಪಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಹಳೆ ಜಿಲ್ಲಾಧಿಕಾರಿ ಕಚೇರಿ ಬಳಿ ರೈತಾಗ್ರಹ ಧರಣಿ ನಡೆಸಲಾಯಿತು.
ಬಿಜೆಪಿ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಭೂ ಒಡೆಯ ಎಂಬ ಮಹತ್ವಾಕಾಂಕ್ಷೆಯ ಉದ್ದೇಶದಕ್ಕೆ ಕೊಡಲಿ ಪೆಟ್ಟು ನೀಡಿ ಉಳ್ಳವನೇ ಭೂ ಒಡೆಯನಾಗಲು ಅವಕಾಶ ಕಲ್ಪಿಸಿಕೊಟ್ಟಿದೆ. ಈ ಮೂಲಕ ಭೂ ಸುಧಾರಣಾ ಕಾಯ್ದೆಯ ಮೂಲ ಉದ್ದೇಶವನ್ನೇ ಅಳಿಸಿ ಹಾಕಿದೆ. ರೈತ ಪರವಾಗಿ ಸುಧಾರಾಣೆಗಳನ್ನು ತರಬೇಕಾದ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ಅನುಕೂಲವಾಗುವಂತೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಗೆ ತಂದು ಹೈನುಗಾರಿಕೆಗೆ ದೊಡ್ಡ ಪೆಟ್ಟು ನೀಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರೈತ, ಕಾರ್ಮಿಕ, ಮಹಿಳಾ ವಿರೋಧಿ ಕಾಯ್ದೆಗಳನ್ನು ರದ್ದುಪಡಿಸುವ ಭರವಸೆ ನೀಡಿತ್ತು. ಹೀಗಾಗಿ ಅದರಂತೆ ನಡೆದುಕೊಳ್ಳುವಂತೆ ಆಗ್ರಹಿಸಿದರು.
ಎಪಿಎಂಸಿ ಕಾಯ್ದೆಯನ್ನು ರೈತ ಸ್ನೇಹಿಯಾಗಿ ರೂಪಿಸಬೇಕು. ೨೦೧೩ರ ಭೂ ಸ್ವಾಧೀನ ಕಾಯ್ದೆ ರೈತ ವಿರೋಧಿಯಾಗಿದ್ದು, ತಿದ್ದುಪಡಿ ಮಾಡಿ ರೈತಪರ ನಿಯಮಗಳನ್ನು ರೂಪಿಸಬೇಕು. ಹಿಂದಿನ ಸರ್ಕಾರ ಸಂಘ ಪರಿವಾರಕ್ಕೆ ನೀಡಿರುವ ಭೂಮಿಯನ್ನು ವಾಪಸ್ ಪಡೆದು ಸರ್ಕಾರಕ್ಕೆ ಮರಳಿಸಬೇಕು. ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ರೂಪ ನೀಡಿ ಸ್ವಾಯತ್ತತೆ ಮತ್ತು ಸವಲತ್ತು ನೀಡಬೇಕು. ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ೨೦೨೨ರ ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಯನ್ನು ರಾಜ್ಯದಲ್ಲಿ ಜಾರಿಗೆ ತರಬಾರದು. ಕೃಷಿ ಪಂಪ್‌ಸೆಟ್‌ಗಳ ಹಳೆ ಬಾಕಿ ವಸೂಲಿಗೆ ತಡೆ ನೀಡಬೇಕು. ರೈತರಿಗೆ ಸಕಾಲದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳನ್ನು ನಿಗದಿತ ಬೆಲೆಯಲ್ಲಿ ಪೂರೈಸಬೇಕು. ಸಸಿಗಳ ದರ ಏರಿಕೆ ಹಿಂಪಡೆಯಬೇಕು. ಬೀಜ ಕೇಂದ್ರಗಳಿಗೆ ಬಿತ್ತನೆ ಬೀಜ ನೀಡಿರುವ ರೈತರಿಗೆ ಬಾಕಿ ಹಣ ಪಾವತಿಸಬೇಕು. ಕೊಬ್ಬರಿಗೆ ೨೦ ಸಾವಿರ ಬೆಂಬಲ ಬೆಲೆ ನೀಡಬೇಕು. ಭತ್ತದ ಬೆಳೆ ಉತ್ತೇಜಿಸಲು ವಿಶೇಷ ಆದ್ಯತೆ ನೀಡಬೇಕು. ಕೈಗಾರಿಕಾ ಉದ್ದೇಶಕ್ಕೆ ಭೂಮಿ ಖರೀದಿಸಿ ರೈತರನ್ನು ವಂಚಿಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಶ್ರೀರಂಗಪಟ್ಟಣ-ಮಡಿಕೇರಿ ಹೆದ್ದಾರಿಗೆ ಭೂಮಿ ನೀಡಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮಹಿಳಾ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಯುವಘಟಕದ ಅಧ್ಯಕ್ಷ ಪ್ರೇಮ್‌ಕುಮಾರ್, ಸರ್ವೋದಯ ಕರ್ನಾಟಕ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಎನ್.ಗೌಡ, ಬಸವರಾಜು, ಬೊಕ್ಕಳ್ಳಿ ನಂಜುಂಡಸ್ವಾಮಿ, ಪಿ.ಮರಂಕಯ್ಯ, ಹುಣಸೂರು ತಾಲೂಕು ಅಧ್ಯಕ್ಷರಾದ ಬೆಂಕಿಪುರ ಚಿಕ್ಕಣ್ಣ, ಹೆಚ್.ಡಿ.ಕೋಟೆ ತಾಲೂಕು ಅಧ್ಯಕ್ಷ ಮಾದೇವ ನಾಯಕ, ಟಿ.ನರಸೀಪುರ ತಾಲೂಕು ಕಾರ್ಯದರ್ಶಿ ಹತ್ತಳ್ಳಿ ಶಿವನಂಜು, ಮೈಸೂರು ತಾಲೂಕು ಅಧ್ಯಕ್ಷರು ಪ್ರಭಾಕರ್, ಕಾರ್ಯದರ್ಶಿ ಮಂಡಕಳ್ಳಿ ಮಹೇಶ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular