ಗುಂಡ್ಲುಪೇಟೆ: ಕಾರು ಮತ್ತು ಪಿಕ್ ಅಪ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರಿಗೆ ತೀವ್ರತರವಾದ ಗಾಯಾಗಳಾಗಿರುವ ಘಟನೆ ಪಟ್ಟಣದ ಹೊರವಲಯದ ಸೆಂಟ್ ಜಾನ್ಸ್ ಸಮೀಪದ ಹೆದ್ದಾರಿ ರಸ್ತೆಯಲ್ಲಿ ನಡೆದಿದೆ.
ಕೇರಳದ ಕ್ಯಾಲಿಕೇಟ್ ಮೂಲದ ಮುಸ್ತಾಫ್(೨೫), ನಿಹೀರ್(೨೨), ವೈಷ್ಣವಿ(೨೦) ಮತ್ತು ಆಕಾಶ್(೨೩) ನಾಲ್ವರಿಗೆ ತೀವ್ರತರ ಗಾಯವಾಗಿದ್ದು, ಗುಂಡ್ಲುಪೇಟೆಯಿಂದ ತೆರಳುತಿದ್ದ ಪಿಕ್ ಅಪ್ ವಾಹನಕ್ಕೆ ಊಟಿ ಕಡೆಯಿಂದ ಬರುತ್ತಿದ್ದ ಕೇರಳ ನೋಂದಣಿಯ ಕಾರು ಅತೀ ವೇಗದಿಂದ ಬಂದು ಓವರ್ ಟೇಕ್ ಮಾಡುವ ಭರದಲ್ಲಿ ಪಿಕ್ ಅಪ್ ವಾಹನಕ್ಕೆ ಗುದ್ದಿದೆ. ಇದರಿಂದ ಕಾರಿನಲ್ಲಿದ್ದ ಯುವಕ ಹಾಗೂ ಯುವತಿಗೆ ಕಾಲು ಮುರಿದಿದ್ದು, ಉಳಿದ ಇಬ್ಬರ ತಲೆ ಮತ್ತು ಕೈಗೆ ಗಾಯಾಗಳಾಗಿದೆ. ಇನ್ನೂ ಪಿಕ್ ಅಪ್ ವಾಹನ ಚಾಲಕನಿಗೂ ಸಹ ಸಣ್ಣಪುಟ್ಟ ಗಾಯಾಗಳಾಗಿವೆ ಎನ್ನಲಾಗಿದೆ. ಘಟನೆಯಿಂದ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮಾಹಿತಿ ಅರಿತ ಗುಂಡ್ಲುಪೇಟೆ ಪೊಲೀಸರು ಕೂಡಲೇ ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ವೈದ್ಯರ ಸೂಚನೆ ಮೇರೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಪಿಕ್ ಅಪ್ ವಾಹನ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಾಫಿಕ್ ಜಾಮ್: ಗುಂಡ್ಲುಪೇಟೆ-ಊಟಿ ಹೆದ್ದಾರಿ ರಸ್ತೆಯಲ್ಲಿ ಅಪಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಸುಮಾರು ಅರ್ಧ ಗಂಟೆಗು ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು. ಇದರಿಂದ ಕಿ.ಮೀ ದೂರದವರೆಗೆ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾರಾಂತ್ಯ ಹಾಗೂ ಹೊಸ ವರ್ಷದ ಅಂತ್ಯವಾದ್ದರಿಂದ ಊಟಿಗೆ ನೂರಾರು ವಾಹನಗಳು ಸಂಚರಿಸುತಿದ್ದ ಕಾರಣ ವಾಹನ ಸವಾರರಿಗೆ ಕಿರಿಕಿರಿ ಉಂಟಾಯಿತು.