ಮೈಸೂರು: ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಜನವರಿ 22ರಂದು ಉದ್ಘಾಟನೆಯಾಗಲಿದೆ.
ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರು ಮೂಲದ ಶಿಲ್ಪಿ ಅರುಣ್ ಯೋಗಿರಾಜ್ ಎನ್ನುವರು ಕೆತ್ತನೆ ಮಾಡಿರುವುದು ವಿಶೇಷವಾಗಿದ್ದು, ಇದೀಗ ಅವರು ಕೆತ್ತನೆ ಮಾಡಿದ ಮೂರ್ತಿಯನ್ನು ಅಂತಿಮಗೊಳಿಸಲಾಗಿದೆ.
ರಾಮಜನ್ಮ ಭೂಮಿ ಟ್ರಸ್ಟ್ ಈ ಬಗ್ಗೆ ಮಾಹಿತಿ ನೀಡಿದೆ. ಮತ ಹಾಕುವ ಮೂಲಕ ರಾಮಲಲ್ಲಾನ ಮೂರ್ತಿಯನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ.
ಕೃಷ್ಣ ಶಿಲೆ ಸಿಕ್ಕಿದ್ದು ಹೇಗೆ ?
ಮೂರ್ತಿಗೆ ಬಳಸಲಾದ ಶಿಲೆ ಕೂಡ ಮೈಸೂರಿನದ್ದೇ ಎಂಬುವುದು ವಿಶೇಷ. ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕು ಕೃಷ್ಣಶಿಲೆಯಲ್ಲಿ ಮೂರ್ತಿ ನಿರ್ಮಾಣ ಕಾರ್ಯ ಮಾಡಲಾಗಿದ್ದು, ಪ್ರತಿಮೆಯನ್ನು ಪೂರ್ಣಗೊಳಿಸಲು ಆರು ತಿಂಗಳು ತೆಗೆದುಕೊಂಡಿದ್ದಾರೆ . ರಾಮಲಲ್ಲಾ ಮೂರ್ತಿ ಅಡಿಯಿಂದ ಹಣೆಯವರೆಗೆ 51 ಇಂಚು ಎತ್ತರವಿದ್ದು, ಪ್ರತಿಮೆಯು “ಪ್ರಭಾವಳಿ” ಸೇರಿದಂತೆ ಎಂಟು ಅಡಿ ಎತ್ತರ ಮೂರೂವರೆ ಅಡಿ ಅಗಲ ಹೊಂದಿದೆ.
ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಕೂಡ ಪ್ರತ್ಯೇಕ ಮೂರ್ತಿ ಕೆತ್ತನೆ ಮಾಡಿದ್ದಾರೆ.
ಕೃಷ್ಣ ಶಿಲೆ ಮೂರ್ತಿ ಕೆತ್ತನೆಗೆ ಪ್ರಾಶಸ್ತ್ಯವಾಗಿರುವ ಕಲ್ಲು. ಮೈಸೂರು ತಾಲೂಕಿನ ಹಾರೋಹಳ್ಳಿ ಗ್ರಾಮದ ರಾಮ್ ದಾಸ್ ಎಂಬುವರ ಜಮೀನಿನಲ್ಲಿ ಈ ಕೃಷ್ಣ ಶಿಲೆ ಕಲ್ಲು ಸಿಕ್ಕಿತ್ತು. ಈ ವಿಷಯ ತಿಳಿದು ರಾಮ್ ದಾಸ್ ಜಮೀನು ಗುತ್ತಿಗೆ ಪಡೆದಿದ್ದ ಗುಜ್ಜೇಗೌಡನಪುರದ ಶ್ರೀನಿವಾಸ್ ಅವರನ್ನು ಸುರೇಂದ್ರ ವಿಶ್ವಕರ್ಮ ಅವರು ಸಂಪರ್ಕ ಮಾಡಿದ್ದರು. ಬಳಿಕ ಮಾನಯ್ಯ ಬಡಿಗೇರ್ ಎಂಬುವರು ಕಲ್ಲು ಪರೀಕ್ಷೆ ಮಾಡಿದ್ದರು. ನಂತರ ಅಯೋಧ್ಯೆಯ ಗುರುಗಳ ಸಮ್ಮುಖದಲ್ಲಿ ಜಮೀನಿನಲ್ಲಿ ಸಿಕ್ಕ ಕಲ್ಲನ್ನು ಮೂರ್ತಿ ಕೆತ್ತನೆಗೆ ಅಂತಿಮಗೊಳಿಸಲಾಯಿತು.
ಇನ್ನು ರಾಮ್ ದಾಸ್ ಜಮೀನಲ್ಲಿ 10 ಅಡಿ ಆಳದಲ್ಲಿ ಅಗೆದು ಶಿಲೆಯನ್ನು ತೆಗೆಯಲಾಯಿತು. ರಾಮನ ಮೂರ್ತಿಗಾಗಿ 19 ಟನ್ ತೂಕದ ಸುಮಾರು 9 ಅಡಿ 8 ಇಂಚು ಉದ್ದದ ಶಿಲೆಯನ್ನು ಹೊರ ತೆಗೆದು ಅಯೋಧ್ಯೆಗೆ ರವಾನಿಸಲಾಯಿತು.
ಎಂಬಿಎ ಪದವೀಧರರಾಗಿರುವ ಅರುಣ್ ಯೋಗಿರಾಜ್, ಕಾರ್ಪೋರೇಟ್ ನೌಕರಿಯನ್ನು ತೊರೆದು ಕುಟುಂಬ ನಡೆಸಿಕೊಂಡು ಬಂದ ಶಿಲ್ಪ ಕೆತ್ತನೆ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದು, ಇದೀಗ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮ ಲಲ್ಲ ಮೂರ್ತಿಯನ್ನು ಕೆತ್ತನೆ ಮಾಡಿದ್ದಾರೆ.